ನವದೆಹಲಿ:ದೇಶದಲ್ಲಿ ಒಟ್ಟಾರೆ ಅಪರಾಧ ಪ್ರಕರಣಗಳ ಸಂಖ್ಯೆ ಶೇ. 6ರಷ್ಟು ಇಳಿಕೆಯಾಗಿದ್ದರೂ, ಮಕ್ಕಳ ಸುರಕ್ಷತೆ ಮತ್ತು ಸೈಬರ್ ಅಪರಾಧಗಳ ವಿಷಯದಲ್ಲಿ ಆತಂಕಕಾರಿ ಬೆಳವಣಿಗೆ ಕಂಡುಬಂದಿದೆ ಎಂದು ಎನ್ಸಿಆರ್ಬಿ ಇತ್ತೀಚಿನ ವರದಿ ತಿಳಿಸಿದೆ. ಮಹಿಳೆಯರ ಮೇಲಿನ ಒಟ್ಟಾರೆ ಅಪರಾಧಗಳು ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ, ಪತಿ ಮತ್ತು ಸಂಬಂಧಿಕರಿಂದ ನಡೆಯುವ ಗೃಹಹಿಂಸೆಯ ಪ್ರಕರಣಗಳು ಅಗ್ರಸ್ಥಾನದಲ್ಲಿ ಮುಂದುವರಿದಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ. 5.9ರಷ್ಟು ಹೆಚ್ಚಳವಾಗಿದ್ದು, ಒಟ್ಟು 1.8 ಲಕ್ಷ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಅಪಹರಣ (ಶೇ. 40) ಮತ್ತು ಲೈಂಗಿಕ ದೌರ್ಜನ್ಯ (ಶೇ. 36.9) ಪ್ರಕರಣಗಳೇ ಹೆಚ್ಚಿವೆ.
ಮಹಿಳೆಯರ ಮೇಲಿನ ಅಪರಾಧಗಳು ಶೇ. 1.5ರಷ್ಟು ಇಳಿಕೆಯಾಗಿದ್ದು, 4.41 ಲಕ್ಷ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ‘ಪತಿ ಅಥವಾ ಸಂಬಂಧಿಕರಿಂದ ಕ್ರೌರ್ಯ’ (ಗೃಹಹಿಂಸೆ) ಪ್ರಕರಣಗಳು ಶೇ. 42ರಷ್ಟು ಪಾಲನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿವೆ.
ನಾಪತ್ತೆಯಾದ ಮಕ್ಕಳು: 2024ರಲ್ಲಿ ಒಟ್ಟು 98,375 ಮಕ್ಕಳು ನಾಪತ್ತೆಯಾಗಿದ್ದು, ಇದು ಶೇ. 7.8ರಷ್ಟು ಏರಿಕೆಯನ್ನು ತೋರಿಸುತ್ತಿದೆ. ಇದರಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯೇ (75,603) ಹೆಚ್ಚಿರುವುದು ಆತಂಕಕಾರಿ.
ಸೈಬರ್ ಅಪರಾಧಗಳು ಶೇ. 17.9ರಷ್ಟು ಭಾರಿ ಏರಿಕೆ ಕಂಡಿದ್ದು, ಆರ್ಥಿಕ ಅಪರಾಧಗಳು ಶೇ. 4.6ರಷ್ಟು ಹೆಚ್ಚಾಗಿವೆ.
ಮೆಟ್ರೋ ನಗರಗಳ ಸ್ಥಿತಿ: ದೆಹಲಿಯು ಮಹಿಳೆಯರು ಮತ್ತು ಹಿರಿಯ ನಾಗರಿಕರ ವಿರುದ್ಧದ ಅಪರಾಧಗಳಲ್ಲಿ ಇಂದಿಗೂ ಮೊದಲ ಸ್ಥಾನದಲ್ಲಿದೆ.








