ಬೆಂಗಳೂರು : ಶೃಂಗೇರಿ ಅಂಚೆ ಮತ ಮರು ಎಣಿಕೆಯಲ್ಲಿ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಯನ್ನು ಭೇಟಿಯಾಗಿ ಮತಪತ್ರ ತಿದ್ದಿರುವುದಾಗಿ ಆರೋಪಿಸಿ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ.
ಭೇಟಿ ಬಳಿಕ ಮಾತನಾಡಿದ ಅವರು, 2023ರ ಚುನಾವಣೆ ಮತ ಎಣಿಕೆಯ ವೇಳೆ ಜೆಡಿಎಸ್ ಕಾಂಗ್ರೆಸ್, ಬಿಜೆಪಿ, ಪಕ್ಷೇತರರ ಅಭ್ಯರ್ಥಿಗಳ ಕೌಂಟಿಂಗ್ ಏಜೆಂಟ್ ಇದ್ದರು. ಪಾರದರ್ಶಕವಾಗಿ ಮತ ಎಣಿಕೆ ಆಗಿತ್ತು. ಮತ ಎಣಿಕೆ ಬಳಿಕ ರಾಜೇಗೌಡ ಗೆದ್ದರು ಎಂದು ಘೋಷಣೆ ಮಾಡಿದ್ದರು. ವ್ಯಾಲಿಡ್ ಯಾವುದು ಇನ್ವ್ಯಾಲಿಡ್ ಯಾವುದು ಎಂದು ಎಲ್ಲರಿಗೂ ತೋರಿಸಿದ್ದರು. ಆಮೇಲೆ ನನ್ನ ವಿರುದ್ಧ ಎಲೆಕ್ಷನ್ ಫಿಟಿಶನ್ ಹಾಕಿ, ಅನೇಕ ಆರೋಪ ಮಾಡಿದರು. ಈ ಹಿನ್ನೆಲೆ ಮರು ಎಣಿಕೆಗೆ ಉಚ್ಚ ನ್ಯಾಯಾಲಯ ಆದೇಶ ಮಾಡಿತ್ತು ಎಂದು ವಿವರಿಸಿದರು.








