ಬಾಗಲಕೋಟೆ: ಚಿಕಿತ್ಸೆಗಾಗಿ ಬರಬೇಕಾದ ಆಸ್ಪತ್ರೆಯೇ ಮಹಿಳೆಯೊಬ್ಬರ ಪಾಲಿಗೆ ನರಕವಾದ ಘಟನೆ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯ ಶೌಚಾಲಯದಲ್ಲಿ ವಿಧವೆ ಮಹಿಳೆಯ ಮೇಲೆ ಹೊರಗುತ್ತಿಗೆ ನೌಕರನೊಬ್ಬ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಸ್ಪತ್ರೆಯಲ್ಲಿ ಡಿ-ದರ್ಜೆ ನೌಕರನಾಗಿ ಕೆಲಸ ಮಾಡುತ್ತಿದ್ದ ಫರೀದ್ ಸಾಬ್ ಡಾಂಗಿ ಅತ್ಯಾಚಾರ ಎಸಗಿದ ಆರೋಪಿ. ಸಂತ್ರಸ್ತ 34 ವರ್ಷದ ಮಹಿಳೆಯು, ಕಳೆದ ಒಂದು ತಿಂಗಳಿನಿಂದ ಅನಾರೋಗ್ಯ ಪೀಡಿತರಾಗಿರುವ ತನ್ನ ಸಹೋದರನ ಆರೈಕೆಗಾಗಿ ಆಸ್ಪತ್ರೆಯಲ್ಲಿದ್ದರು. ಈ ಸಮಯದಲ್ಲಿ ಆರೋಪಿ ಫರೀದ್ ಸಾಬ್ ಮಹಿಳೆಯೊಂದಿಗೆ ಪರಿಚಯ ಬೆಳೆಸಿಕೊಂಡಿದ್ದ ಎನ್ನಲಾಗಿದೆ.
ಮೇ 4ರ ಮಧ್ಯರಾತ್ರಿ ಅಂದಾಜು 12 ರಿಂದ 2 ಗಂಟೆಯ ಸುಮಾರಿಗೆ ಮಹಿಳೆಗೆ ಬೆದರಿಕೆಯೊಡ್ಡಿದ ಆರೋಪಿ, ಆಕೆಯನ್ನು ಶೌಚಾಲಯಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೆ, ಕೃತ್ಯದ ಬಳಿಕ ಸಂತ್ರಸ್ತೆಯನ್ನು ಶೌಚಾಲಯದ ಒಳಗಡೆಯೇ ಲಾಕ್ ಮಾಡಿ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.
ಪೊಲೀಸ್ ದೂರು ಮತ್ತು ಕ್ರಮ:
ಘಟನೆ ಬೆಳಕಿಗೆ ಬರುತ್ತಿದ್ದಂತೆ ಆಕ್ರೋಶಗೊಂಡ ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಯನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಸ್ತುತ ಬಾಗಲಕೋಟೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಬಿಎನ್‌ಎಸ್ (BNS) ಸೆಕ್ಷನ್ 127(2), 352, 351(2), 64 ಹಾಗೂ 64(2)(ಇ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಕೆಲಸದಿಂದ ವಜಾ:
ಜಿಲ್ಲಾಸ್ಪತ್ರೆಯ ಆವರಣದಲ್ಲೇ ಇಂತಹ ಗಂಭೀರ ಅಪರಾಧ ನಡೆದಿರುವುದು ಆಡಳಿತ ಮಂಡಳಿಯನ್ನು ಬೆಚ್ಚಿಬೀಳಿಸಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಶಸ್ತ್ರಚಿಕಿತ್ಸಕ (Surgeon) ಡಾ. ಮಹೇಶ್ ಕೋಣಿ ಅವರು, ಆರೋಪಿ ಫರೀದ್ ಸಾಬ್‌ನನ್ನು ತಕ್ಷಣವೇ ಜಾರಿಗೆ ಬರುವಂತೆ ಕೆಲಸದಿಂದ ವಜಾಗೊಳಿಸಿ ಆದೇಶಿಸಿದ್ದಾರೆ.








