ನವದೆಹಲಿ: ರಾಷ್ಟ್ರಗೀತೆ ‘ವಂದೇ ಮಾತರಂ’ ಹಾಡುವುದಕ್ಕೆ ಅಡ್ಡಿಪಡಿಸುವುದು ಅಥವಾ ಗೀತೆಯನ್ನು ಅವಮಾನಿಸುವುದನ್ನು ಇನ್ಮುಂದೆ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲು ಕೇಂದ್ರ ಸಚಿವ ಸಂಪುಟವು ಮಹತ್ವದ ತೀರ್ಮಾನ ಕೈಗೊಂಡಿದೆ. ಇದಕ್ಕಾಗಿ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971’ ಕ್ಕೆ ತಿದ್ದುಪಡಿ ತರುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.
ಈವರೆಗೆ ರಾಷ್ಟ್ರಗೀತೆ ‘ಜನ ಗಣ ಮನ’, ರಾಷ್ಟ್ರಧ್ವಜ ಮತ್ತು ಸಂವಿಧಾನಕ್ಕೆ ಮಾತ್ರ ಇದ್ದ ಕಾನೂನಾತ್ಮಕ ರಕ್ಷಣೆಯನ್ನು ಈಗ ‘ವಂದೇ ಮಾತರಂ’ಗೂ ವಿಸ್ತರಿಸಲಾಗುತ್ತಿದೆ. ರಾಷ್ಟ್ರಧ್ವಜ ಅಥವಾ ಸಂವಿಧಾನದ ಪ್ರತಿಯನ್ನು ಸುಡುವುದು, ವಿರೂಪಗೊಳಿಸುವುದು ಅಥವಾ ರಾಷ್ಟ್ರಗೀತೆ ಹಾಡುವಾಗ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ, ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ 3 ನಿಮಿಷ 10 ಸೆಕೆಂಡ್ಗಳ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿ ಈಗಾಗಲೇ ಆದೇಶ ಹೊರಡಿಸಲಾಗಿದೆ.
ನಿಯಮಗಳೇನು?
ಕೇಂದ್ರ ಗೃಹ ಸಚಿವಾಲಯದ ಆದೇಶದಂತೆ, ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಯನ್ನು ಮೊದಲು ಹಾಡಬೇಕು ಅಥವಾ ನುಡಿಸಬೇಕು. ಗೀತೆ ಹಾಡುವ ಸಂದರ್ಭದಲ್ಲಿ ಸಭಿಕರೆಲ್ಲರೂ ಎದ್ದು ನಿಂತು ಗೌರವ ಸಲ್ಲಿಸುವುದು ಕಡ್ಡಾಯವಾಗಿದೆ.ಸಂಸತ್ತಿನಲ್ಲಿ ಈ ತಿದ್ದುಪಡಿ ಅಂಗೀಕಾರಗೊಂಡ ನಂತರ, ವಂದೇ ಮಾತರಂಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶ ಸಿಗಲಿದೆ.








