ಬೆಂಗಳೂರು: ಮಗುವಿಗೆ ತಾಯಿಯಿಂದ ಗಂಭೀರ ಅಪಾಯವಿದೆ ಎಂಬುದಕ್ಕೆ ಬಲವಾದ ಸಾಕ್ಷ್ಯಗಳಿಲ್ಲದೆ, ಮಗುವನ್ನು ಭೇಟಿ ಮಾಡುವ ತಾಯಿಯ ಹಕ್ಕನ್ನು ಕಸಿಯುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಮೂಲಕ ಫ್ಯಾಮಿಲಿ ಕೋರ್ಟ್ ವಿಧಿಸಿದ್ದ ನಿರ್ಬಂಧವನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಅರ್ಜಿದಾರ ಮಹಿಳೆಯ ಪತಿ 2025ರಲ್ಲಿ ಮೃತಪಟ್ಟಿದ್ದರು. ಪತಿಯ ನಿಧನದ ನಂತರ ಆಸ್ತಿ ವಿಚಾರವಾಗಿ ಅರ್ಜಿದಾರ ಮಹಿಳೆ ಹಾಗೂ ಆಕೆಯ ಅತ್ತೆಯ ನಡುವೆ ಕಾನೂನು ಸಮರ ಆರಂಭವಾಗಿತ್ತು. ಈ ಮಧ್ಯೆ, ಅತ್ತೆ ಮತ್ತು ನಾದಿನಿ ಸೇರಿ 11 ವರ್ಷದ ಅಪ್ರಾಪ್ತ ಮಗುವಿನ ಪಾಲನೆಯ ಹಕ್ಕು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ತಾಯಿ ಮಗುವನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಆರೋಪದ ಮೇರೆಗೆ, ಈ ಹಿಂದೆ ಕೌಟುಂಬಿಕ ನ್ಯಾಯಾಲಯವು ಮಗುವಿನ ಭೇಟಿಗೆ ತಾಯಿಗೆ ನಿರ್ಬಂಧ ಹೇರಿತ್ತು. ಇದನ್ನು ಪ್ರಶ್ನಿಸಿ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಮಗುವಿನ ಭೇಟಿಯ ಹಕ್ಕು ಸಾಂವಿಧಾನಿಕ ಮತ್ತು ನೈಸರ್ಗಿಕ ಹಕ್ಕಾಗಿದೆ. ಇದನ್ನು ಅಕಾರಣವಾಗಿ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಮಗು ತನ್ನ ತಾಯಿಯ ವಿರುದ್ಧ ಹೇಳಿಕೆ ನೀಡಿದ್ದರೂ, ಅದನ್ನು ಅಂತಿಮ ಎಂದು ಪರಿಗಣಿಸಲು ಸಾಧ್ಯವಿಲ್ಲ. ಮಗು ದೀರ್ಘಕಾಲ ಅಜ್ಜಿಯ ವಶದಲ್ಲಿದ್ದಾಗ, ಮಗುವಿನ ಮನಸ್ಸನ್ನು ಪ್ರಭಾವಿಸಿರುವ ಸಾಧ್ಯತೆಯಿರುತ್ತದೆ. ಹಿಂದೂ ಮೈನಾರಿಟಿ ಮತ್ತು ಗಾರ್ಡಿಯನ್ಶಿಪ್ ಕಾಯ್ದೆಯ ಪ್ರಕಾರ, ತಂದೆಯ ಮರಣದ ನಂತರ ತಾಯಿಯೇ ಮೊದಲ ನೈಸರ್ಗಿಕ ಪಾಲಕಿ (Natural Guardian).








