ಶಿವಮೊಗ್ಗ: ಅರಣ್ಯ ಇಲಾಖೆಯ ಸಿಬ್ಬಂದಿ ಕಣ್ಣಿದ್ದೂ ಕುರುಡಾದರೇ ಅಥವಾ ಇದು ವ್ಯವಸ್ಥಿತ ಕರ್ಮಕಾಂಡವೇ? ಇಂತಹದೊಂದು ಪ್ರಶ್ನೆ ಮೂಡುವಂತೆ ಸಾಗರ ತಾಲ್ಲೂಕಿನ ಮಾಲ್ವೆಯಲ್ಲಿ ಸಾರ್ವಜನಿಕರು ಬೆಳೆಸಿದ ಗ್ರಾಮ ಅರಣ್ಯದ ಮರಗಳನ್ನು ಅಕ್ರಮವಾಗಿ ಲೂಟಿ ಮಾಡಿರುವ ಘಟನೆ ಬಟಾಬಯಲಾಗಿದೆ.
30 ವರ್ಷಗಳ ಗ್ರಾಮಸ್ಥರ ಶ್ರಮಕ್ಕೆ ಕನ್ನ
ಸಾಗರ ತಾಲ್ಲೂಕಿನ ಮಾಲ್ವೆ ಗ್ರಾಮದ ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ಸುಮಾರು 30 ವರ್ಷಗಳ ಹಿಂದೆ ಗ್ರಾಮ ಅರಣ್ಯ ಸಮಿತಿಯ ವತಿಯಿಂದ ಹೈಬ್ರಿಡ್ ಅಕೇಶಿಯಾ ಮರಗಳನ್ನು ನೆಡಲಾಗಿತ್ತು. ಗ್ರಾಮಸ್ಥರು ಮಕ್ಕಳಂತೆ ಸಲಹಿದ ಈ ಮರಗಳು ಇಂದು ಬೃಹತ್ ಗಾತ್ರದ ಹೆಮ್ಮರಗಳಾಗಿ ಬೆಳೆದು ನಿಂತಿವೆ. ಆದರೆ, ಈ ಬೆಲೆಬಾಳುವ ಸಂಪತ್ತಿನ ಮೇಲೆ ಕಣ್ಣಿಟ್ಟ ಟಿಂಬರ್ ಕಾಂಟ್ರಾಕ್ಟರ್ ಒಬ್ಬರು, ಕಳೆದ ಕೆಲವು ದಿನಗಳಿಂದ ರಾಜಾರೋಷವಾಗಿ ಮರಗಳನ್ನು ಕಡಿದು ಲಕ್ಷಾಂತರ ರೂಪಾಯಿ ಮೌಲ್ಯದ ನಾಟಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಬಯಲಾದ ಲೂಟಿ
ಗ್ರಾಮದ ನಿವಾಸಿ ಕೃಷ್ಣ ಅವರು ತಮ್ಮ ತೋಟಕ್ಕೆ ನೀರು ಬಿಡಲು ಹೋದಾಗ ಅರಣ್ಯದಲ್ಲಿ ಮರಗಳನ್ನು ಕಡಿಯುತ್ತಿರುವುದು ಅವರ ಗಮನಕ್ಕೆ ಬಂದಿದೆ. ಅನುಮತಿ ಬಗ್ಗೆ ವಿಚಾರಿಸಿದಾಗ ಮರ ಕಡಿಯುತ್ತಿದ್ದವರು ಅಸ್ಪಷ್ಟ ಉತ್ತರ ನೀಡಿದ್ದಾರೆ. ತಕ್ಷಣ ಕೃಷ್ಣ ಅವರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದು, ಎಲ್ಲರೂ ಒಗ್ಗೂಡಿ ಸ್ಥಳಕ್ಕೆ ಧಾವಿಸಿ ಲೂಟಿಯನ್ನು ತಡೆದಿದ್ದಾರೆ. ಈ ವೇಳೆ ಮರ ಕಡಿಯುತ್ತಿದ್ದವರು ಪಕ್ಕದ ಜಮೀನಿನವರ ಹೆಸರೇಳಿ ನುಣುಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸ್ಥಳಕ್ಕೆ ಅಧಿಕಾರಿಗಳ ಭೇಟಿ: 43 ಮರಗಳ ಕಡಿತಲೆ ದೃಢ
ಘಟನೆಯ ಬಗ್ಗೆ ಮಾಹಿತಿ ತಿಳಿದ ಸಾಗರ ಎಸಿಎಫ್ ರವಿ, ಆರ್ ಎಫ್ ಓ ಅಣ್ಣಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು 43 ಹೈಬ್ರಿಡ್ ಅಕೇಶಿಯಾ ಮರಗಳನ್ನು ಅಕ್ರಮವಾಗಿ ಕಡಿಯಲಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಕಡಿಯಲಾಗಿದ್ದ ನಾಟಾವನ್ನು ಅಧಿಕಾರಿಗಳು ಸೀಜ್ ಮಾಡಿದ್ದು, ಗ್ರಾಮಸ್ಥರ ದೂರಿನ ಮೇರೆಗೆ 9 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಅರಣ್ಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
“ಇಷ್ಟೊಂದು ಮರಗಳನ್ನು ಕಡಿಯುತ್ತಿದ್ದರೂ ಇಲಾಖೆಗೆ ತಿಳಿಯಲಿಲ್ಲವೇ?” ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಸಿಎಫ್ ರವಿ ಅವರು, “ಆರ್ ಎಫ್ ಓ ರಜೆಯಲ್ಲಿದ್ದರು ಹಾಗೂ ಇನ್ನೊಬ್ಬರು ನ್ಯಾಯಾಲಯದ ಕೆಲಸದಲ್ಲಿ ಬ್ಯುಸಿಯಾಗಿದ್ದರು, ಹೀಗಾಗಿ ಇದು ಗಮನಕ್ಕೆ ಬಂದಿಲ್ಲ” ಎಂದು ಸಮರ್ಥಿಸಿಕೊಂಡರು. ಇದರಿಂದ ಕೆರಳಿದ ಗ್ರಾಮಸ್ಥರು, ಎಸಿಎಫ್ ರವಿ ಹಾಗೂ ಆರ್ ಎಫ್ ಓ ಅಣ್ಣಪ್ಪ ಅವರನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು. ಇಲಾಖೆಯ ನಿರ್ಲಕ್ಷ್ಯದಿಂದಲೇ ಇಂತಹ ಬೃಹತ್ ಲೂಟಿ ನಡೆಯಲು ಸಾಧ್ಯ ಎಂದು ಆಕ್ರೋಶ ಹೊರಹಾಕಿದರು.
ಅರಣ್ಯ ಸಚಿವರಿಗೆ ದೂರು ನೀಡಲು ನಿರ್ಧಾರ
ಮಾಲ್ವೆ ಗ್ರಾಮ ಪಂಚಾಯ್ತಿಯ ಮಾಜಿ ಉಪಾಧ್ಯಕ್ಷ ಮಹಾಬಲೇಶ್ ಮಾತನಾಡಿ, “ಸರ್ವೆ ನಂಬರ್ 9 ಮತ್ತು 43 ರಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯಲಾಗಿದೆ. ಈ ಬಗ್ಗೆ ನಾವು ಸುಮ್ಮನಿರುವುದಿಲ್ಲ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಪತ್ರ ಬರೆದು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸುತ್ತೇವೆ” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾಲ್ವೆ ಗ್ರಾಮಸ್ಥರಾದಂತ ಪ್ರಕಾಶ್, ಚಿನ್ನಪ್ಪ, ವಸಂತ್, ಮಂಜುನಾಥ್, ಕೇದಾರೇಶ್ವರ, ರವಿಚಂದ್ರ, ನಾಗರಾಜ್, ಯೋಗೇಶ್, ಪ್ರೇಮ್ ಕುಮಾರ್, ಆನಂದ್, ರಾಮಕೃಷ್ಣ, ಮಂಜಣ್ಣ, ಲವ, ಭರತ್, ವೀರಭದ್ರ, ಬಸವರಾಜ್, ಬಿಂದು ಮಾಧವ, ಜಗದೀಶ್, ಉದಯ ಉಪಸ್ಥಿತರಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..
BREAKING: ಮಾಧ್ಯಮ ಲೋಕದ ದಿಗ್ಗಜ, CNN ಸಂಸ್ಥಾಪಕ ಟೆಡ್ ಟರ್ನರ್ ಇನ್ನಿಲ್ಲ | Ted Turner No More
BREAKING: ರಾಸಲೀಲೆ ವಿಡಿಯೋ ಕೇಸ್: ರಾಜ್ಯ ಸರ್ಕಾರದಿಂದ ರಾಮಚಂದ್ರ ರಾವ್ ಅಮಾನತು ವಾಪಸ್








