ಕೋಲ್ಕತ್ತಾ:ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಜಯಗಳಿಸಿದ್ದರೂ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಧಿಕಾರದಿಂದ ಕೆಳಗಿಳಿಯಲು ನಿರಾಕರಿಸಿರುವುದು ರಾಜ್ಯದಲ್ಲಿ ಅಭೂತಪೂರ್ವ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ. “ನಾನು ಸೋತಿಲ್ಲ, ಜನಾದೇಶವನ್ನು ಲೂಟಿ ಮಾಡಲಾಗಿದೆ” ಎಂದು ಆರೋಪಿಸಿರುವ ದೀದಿ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿದ್ದಾರೆ. ಇದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ (President’s Rule) ಜಾರಿಯಾಗುವ ಸಾಧ್ಯತೆಯನ್ನು ಹೆಚ್ಚಿಸಿದೆ.
294 ಸ್ಥಾನಗಳ ಪೈಕಿ ಬಿಜೆಪಿ 207 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದಿದೆ. ಆದರೆ ಮಮತಾ ಬ್ಯಾನರ್ಜಿ ಅವರು ಇವಿಎಂ ದೋಚಲಾಗಿದೆ ಮತ್ತು ಪಿತೂರಿ ನಡೆದಿದೆ ಎಂದು ಆರೋಪಿಸಿ, ಶಾಸಕಾಂಗದ ಸಂಪ್ರದಾಯದಂತೆ ನೀಡಬೇಕಿದ್ದ ರಾಜೀನಾಮೆಯನ್ನು ತಡೆಹಿಡಿದಿದ್ದಾರೆ.
ಮಮತಾ ಅವರ ಈ ನಡೆಯನ್ನು “ಸಾಂವಿಧಾನಿಕ ಉಲ್ಲಂಘನೆ” ಎಂದು ಟೀಕಿಸಿರುವ ಬಿಜೆಪಿ, ಸೋಲನ್ನು ಒಪ್ಪಿಕೊಳ್ಳಲಾಗದೆ ಪ್ರಜಾಪ್ರಭುತ್ವದ ಕಂಠ ಹತ್ತಿಕ್ಕುತ್ತಿದ್ದಾರೆ ಎಂದು ಕಿಡಿಕಾರಿದೆ. ಹಾಲಿ ವಿಧಾನಸಭೆಯ ಅವಧಿ ಮೇ 7ಕ್ಕೆ ಮುಕ್ತಾಯವಾಗಲಿದ್ದು, ಆ ಬಳಿಕ ಅವರು ಅಧಿಕಾರದಲ್ಲಿ ಮುಂದುವರಿಯುವುದು ಕಾನೂನುಬಾಹಿರವಾಗಲಿದೆ.
ಮಮತಾ ಬ್ಯಾನರ್ಜಿ ರಾಜೀನಾಮೆ ನೀಡದಿದ್ದರೆ, ರಾಜ್ಯಪಾಲ ಆರ್ ಎನ್ ರವಿ ಅವರು ಅವರನ್ನು ಪದಚ್ಯುತಗೊಳಿಸಿ, ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುವ ಅಥವಾ ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸುವ ಅಧಿಕಾರ ಹೊಂದಿದ್ದಾರೆ. ಕಾನೂನು ತಜ್ಞರ ಪ್ರಕಾರ, ಇಂತಹ ಪರಿಸ್ಥಿತಿಯಲ್ಲಿ ರಾಜ್ಯಪಾಲರು ಪೊಲೀಸ್ ಬಲ ಬಳಸಿ ಮುಖ್ಯಮಂತ್ರಿಯನ್ನು ತೆರವುಗೊಳಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.








