ಕೋಲ್ಕತ್ತಾ:ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡ ಮುನ್ಸೂಚನೆ ಸಿಕ್ಕಿದೆ. ಪಕ್ಷದ ಅಸ್ತಿತ್ವದ ದೃಷ್ಟಿಯಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರೆದಿದ್ದ ಅತ್ಯಂತ ನಿರ್ಣಾಯಕ ಸಭೆಗೆ ಸುಮಾರು 10 ಮಂದಿ ಶಾಸಕರು ಗೈರುಹಾಜರಾಗಿರುವುದು ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಚುನಾವಣಾ ಫಲಿತಾಂಶದ ನಂತರ ಪಕ್ಷದ ಮುಂದಿನ ನಡೆಯ ಬಗ್ಗೆ ಚರ್ಚಿಸಲು ಮಮತಾ ಬ್ಯಾನರ್ಜಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದರು. ಆದರೆ, 10ಕ್ಕೂ ಹೆಚ್ಚು ಶಾಸಕರು ಸಭೆಗೆ ಬಾರದೆ ಅಂತರ ಕಾಯ್ದುಕೊಂಡಿರುವುದು ದೀದಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಗೈರಾದ ಶಾಸಕರು ಈಗಾಗಲೇ ಬಿಜೆಪಿಯ ಕೇಂದ್ರ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ವದಂತಿಗಳು ಹಬ್ಬಿವೆ. ರಾಜ್ಯದಲ್ಲಿ ಅಧಿಕಾರ ಬದಲಾವಣೆಯ ಮುನ್ಸೂಚನೆ ಸಿಗುತ್ತಿದ್ದಂತೆಯೇ ಶಾಸಕರು ಪಕ್ಷಾಂತರ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಸಭೆಗೆ ಬಾರದ ಶಾಸಕರಲ್ಲಿ ಕೆಲವರು ಅನಾರೋಗ್ಯದ ನೆಪ ನೀಡಿದ್ದರೆ, ಇನ್ನುಳಿದವರು ಫೋನ್ ಸ್ವಿಚ್ ಆಫ್ ಮಾಡಿಕೊಂಡು ಮೌನಕ್ಕೆ ಶರಣಾಗಿದ್ದಾರೆ. ಇದು ಟಿಎಂಸಿ ಹೈಕಮಾಂಡ್ನಲ್ಲಿ ಆತಂಕ ಹೆಚ್ಚಿಸಿದೆ.








