ಕೇಪ್ ವರ್ಡೆ (ಅಟ್ಲಾಂಟಿಕ್ ಸಾಗರ):ಅರ್ಜೆಂಟೀನಾದಿಂದ ಹೊರಟಿದ್ದ ‘ಎಂವಿ ಹೊಂಡಿಯಸ್’ (MV Hondius) ಎಂಬ ಐಷಾರಾಮಿ ಪ್ರವಾಸಿ ಹಡಗಿನಲ್ಲಿ ಮಾರಕ ‘ಹಂಟಾವೈರಸ್’ ಸೋಂಕು ಕಾಣಿಸಿಕೊಂಡಿದ್ದು, ಇಡೀ ಹಡಗು ಈಗ ಸಾವಿನ ಭೀತಿಯಲ್ಲಿದೆ. ಈ ಸೋಂಕಿನಿಂದಾಗಿ ಈಗಾಗಲೇ ಮೂವರು ಪ್ರವಾಸಿಗರು ಸಾವನ್ನಪ್ಪಿದ್ದು, ಸುಮಾರು 150 ಮಂದಿ ಹಡಗಿನಲ್ಲೇ ದಿಗ್ಬಂಧನಕ್ಕೆ ಒಳಗಾಗಿದ್ದಾರೆ.
ಸಾಮಾನ್ಯವಾಗಿ ಹಂಟಾವೈರಸ್ ಇಲಿಗಳ ಮೂತ್ರ ಅಥವಾ ಮಲದ ಮೂಲಕ ಹರಡುತ್ತದೆ. ಆದರೆ ಈ ಹಡಗಿನಲ್ಲಿ ‘ಮನುಷ್ಯನಿಂದ ಮನುಷ್ಯನಿಗೆ’ (Human-to-Human) ವೈರಸ್ ಹರಡುತ್ತಿರುವ ಅಪರೂಪದ ಸಾಧ್ಯತೆಯನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಶಂಕಿಸಿದೆ. ಇದು ವಿಜ್ಞಾನಿಗಳಲ್ಲಿ ತೀವ್ರ ಕಳವಳ ಮೂಡಿಸಿದೆ.
ಮೃತರಲ್ಲಿ ನೆದರ್ಲ್ಯಾಂಡ್ನ ವೃದ್ಧ ದಂಪತಿ ಮತ್ತು ಜರ್ಮನ್ ಪ್ರಜೆ ಸೇರಿದ್ದಾರೆ. ಮತ್ತೊಬ್ಬ ಬ್ರಿಟಿಷ್ ಪ್ರಜೆಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ದಕ್ಷಿಣ ಆಫ್ರಿಕಾದ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗಿದೆ.
ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಹಡಗನ್ನು ಕೇಪ್ ವರ್ಡೆ ಕರಾವಳಿಯ ಸಮೀಪ ನಿಲ್ಲಿಸಲಾಗಿದ್ದು, ಯಾವುದೇ ದೇಶವು ಹಡಗಿಗೆ ಪ್ರವೇಶ ನೀಡಲು ಮುಂದಾಗುತ್ತಿಲ್ಲ. ಹಡಗಿನಲ್ಲಿರುವ 150 ಮಂದಿ ಪ್ರವಾಸಿಗರನ್ನು ಐಸೋಲೇಷನ್ನಲ್ಲಿ ಇರಿಸಲಾಗಿದೆ.








