ಬೆಂಗಳೂರು : ಬೆಂಗಳೂರಲ್ಲಿ ಘೋರ ಕೃತ್ಯವನ್ನು ನಡೆದಿದ್ದು, ನಿರ್ಜನ ಪ್ರದೇಶದಲ್ಲಿ ಕಾರೊಂದು ಹೊತ್ತಿ ಉರಿದಿದೆ. ಸುಟ್ಟುಕರಕಲಾದ ಕಾರಿನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಈ ಘಟನೆ ನಡೆದ ಅನತಿ ದೂರದಲ್ಲಿ ಪುರುಷನೊಬ್ಬನ ಸುಟ್ಟ ಬಟ್ಟೆ ಮೊಬೈಲ್ ಪತ್ತೆಯಾಗಿದೆ. ಸ್ಥಳದಿಂದ ಪರಾರಿಯಾಗಿದ್ದ ವ್ಯಕ್ತಿ ಅದೇ ದಿನ ರಾತ್ರಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ದೊಡ್ಡಬಳ್ಳಾಪುರ ತಾಲೂಕಿನ ಕೆ.ಜಿ ಕುಂಟನಹಳ್ಳಿ ಬಳಿಯ ನಿರ್ಜನ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ನಡೆದ ಕೆಲವೇ ತಾಸಿನಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಇಂಚಿಂಚು ಮಾಹಿತಿಯನ್ನ ಹೊರಗೆ ತಂದಿದ್ದಾರೆ. ಅಂದ ಹಾಗೇ ಇಲ್ಲಿ ಸುಟ್ಟುಕರಕಲಾದ ಸ್ಥಿತಿಯಲ್ಲಿ ಸಿಕ್ಕ ಮಹಿಳೆ ಹೆಸರು ಸರೋಜಾ ಎಂದು ಪೊಲೀಸರು ಗುರುತಿಸಿದ್ದಾರೆ.
ಪ್ರಕರಣ ಹಿನ್ನೆಲೆ?
ದೇವನಹಳ್ಳಿಯಲ್ಲಿ ವಾಸವಾಗಿರುವ ಸರೋಜಾಗೆ ಮದುವೆಯಾಗಿ ಒಬ್ಬ ಮಗನಿದ್ದಾನೆ. ಗಂಡ ಏರ್ ಪೋರ್ಟ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮೇ 2ರಂದು ಹಲ್ಲಿನ ಸಮಸ್ಯೆ ಇದೆ, ಆಸ್ಪತ್ರೆಗೆ ಹೋಗಬೇಕೆಂದು ಗಂಡನಿಗೆ ಹೇಳಿ ಬಸ್ ನಿಲ್ದಾಣಕ್ಕೆ ಡ್ರಾಪ್ ಹಾಕಿಸಿಕೊಂಡಿದ್ದ ಸರೋಜಾ, ಮಾರ್ಗ ಮಧ್ಯದಲ್ಲಿ ಇಳಿದು ಪ್ರಿಯಕರನ ಜೊತೆಯಲ್ಲಿ ಕಾರಿನಲ್ಲಿ ಹೊರಟಿದ್ದಾಳೆ. ಪ್ರಿಯಕರ ರಾಮಾಂಜಿನಪ್ಪ ಯಲಹಂಕ ತಾಲೂಕಿನ ಮಾರಸಂದ್ರ ಗ್ರಾಮದ ನಿವಾಸಿ, ಈತನಿಗೂ ಮದುವೆಯಾಗಿ ಒಬ್ಬ ಮಗಳಿದ್ದಾಳೆ.
ಗಂಡ ಹೆಂಡತಿ ನಡುವೆ ಹೊಂದಾಣಿಕೆ ಇಲ್ಲದ ಕಾರಣದಿಂದ ವಿಚ್ಛೇದನ ಪಡೆದು ಈತ ಹೆಂಡತಿಯಿಂದ ದೂರ ಇದ್ದ. ಈ ಸಮಯದಲ್ಲಿ ರಾಮಾಂಜಿನಪ್ಪ ಸರೋಜಾಳೊಂದಿಗೆ ಸ್ನೇಹ ಬೆಳಸಿದ್ದ. ಹೀಗೆ ಸ್ನೇಹ ಹೊಂದಿದ್ದ ಸರೋಜಾ ಮತ್ತು ರಾಮಾಂಜಿನಪ್ಪ ಕಾರಿನಲ್ಲಿ ಹೊರಟು, ಮಾರಸಂದ್ರ ಮಾರ್ಗವಾಗಿ ದೊಡ್ಡಬಳ್ಳಾಪುರ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕೆ.ಜಿ.ಕುಂಟನಹಳ್ಳಿಯ ನಿರ್ಜನ ಪ್ರದೇಶಕ್ಕೆ ಬಂದಿದ್ದಾರೆ. ಇಲ್ಲಿ ಕೆಲಹೊತ್ತು ಖಾಸಗಿ ಕ್ಷಣಗಳನ್ನ ಕಳೆದಿದ್ದಾರೆ.
ಕೊನೆಯಲ್ಲಿ ಇಬ್ಬರ ನಡುವೆ ಏನೋ ಮಾತಾಗಿದೆ. ಇದರಿಂದ ಕೆರಳಿದ ಆತ ಮಾರಾಕಾಸ್ತ್ರದಿಂದ ಕೊಲೆ ಮಾಡಿ ಅನಂತರ ಕಾರಿನಲ್ಲಿಯೇ ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ವೇಳೆ, ಆತನ ಬಟ್ಟೆಗೂ ಬೆಂಕಿ ತಗುಲಿದೆ. ಹೀಗಾಗಿ ದೂರದಲ್ಲಿ ಶರ್ಟ್ ಮೊಬೈಲ್ ಬಿಟ್ಟು ಪರಾರಿಯಾಗಿದ್ದಾನೆ. ಕಾರು ರಾಮಾಂಜಿನಪ್ಪ ಅವರ ಪಕ್ಕದ ಮನೆಯ ಸುರೇಶ್ ಎಂಬುವರಿಗೆ ಸೇರಿದ್ದು, ಆರೋಗ್ಯ ಸರಿ ಇಲ್ಲ ಆಸ್ಪತ್ರೆಗೆ ಹೋಗಬೇಕು ಎಂದು ರಾಮಾಂಜಿನಪ್ಪ ಕಾರು ತೆಗೆದುಕೊಂಡು ಬಂದಿದ್ದ.
ಆದರೆ, ಕಾರಿಗೆ ಬೆಂಕಿ ಬಿದ್ದ ತಕ್ಷಣವೇ ಕಾರು ಮಾಲೀಕ ಸುರೇಶ್ ಮೊಬೈಲ್ಗೆ ಬೆಂಕಿ ಅವಘಡದಲ್ಲಿ ಕಾರು ಸುಟ್ಟುಹೋಗಿದೆ ಎಂಬ ಸಂದೇಶ ಬಂದಿದೆ. ಈ ಮಾಹಿತಿ ಆದರಿಸಿ ಸ್ಥಳಕ್ಕೆ ಬಂದ ಸುರೇಶ್ ಪರಿಶೀಲನೆ ಮಾಡಿದಾಗ ಸುಟ್ಟುಕರಲಾಗಿದ್ದ ಕಾರಿನಲ್ಲಿ ಮಹಿಳೆ ಶವ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾರು ಮಾಲೀಕ ಸುರೇಶ್, ಕಾರು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಪ್ರಕರಣ ದಾಖಲು ಮಾಡಿದ್ದಾರೆ ಎಂದು ಎಸ್ಪಿ ಚಂದ್ರಕಾಂತ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.








