ನವದೆಹಲಿ:ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (PIL) ಇತ್ತೀಚಿನ ದಿನಗಳಲ್ಲಿ ತಮ್ಮ ಮೂಲ ಉದ್ದೇಶವನ್ನು ಮರೆತು ವೈಯಕ್ತಿಕ ಲಾಭ ಮತ್ತು ಪ್ರಚಾರದ ಸಾಧನಗಳಾಗಿ ಬದಲಾಗುತ್ತಿವೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಮಂಗಳವಾರ ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಒಂಬತ್ತು ನ್ಯಾಯಾಧೀಶರ ಸಂವಿಧಾನ ಪೀಠವು ಪಿಐಎಲ್ಗಳ ಸದ್ಯದ ಸ್ಥಿತಿಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (Public Interest Litigation) ಈಗ ‘ಪೈಸಾ ಇಂಟರೆಸ್ಟ್ ಲಿಟಿಗೇಷನ್’ (ಹಣದ ಹಿತಾಸಕ್ತಿ) ಮತ್ತು ‘ಪೊಲಿಟಿಕಲ್ ಇಂಟರೆಸ್ಟ್ ಲಿಟಿಗೇಷನ್’ (ರಾಜಕೀಯ ಹಿತಾಸಕ್ತಿ) ಆಗಿ ಮಾರ್ಪಟ್ಟಿವೆ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಮಾರ್ಮಿಕವಾಗಿ ನುಡಿದರು.
ಕೇವಲ ಪತ್ರಿಕಾ ವರದಿಗಳನ್ನು ಆಧರಿಸಿ ಪಿಐಎಲ್ಗಳನ್ನು ಸಲ್ಲಿಸುವ ಪ್ರವೃತ್ತಿಯನ್ನು ನ್ಯಾಯಾಲಯ ಖಂಡಿಸಿದೆ. “ಕೇವಲ ಪಿಐಎಲ್ ಸಲ್ಲಿಸುವ ಉದ್ದೇಶಕ್ಕಾಗಿಯೇ ಲೇಖನಗಳನ್ನು ಬರೆಸುವುದು ಈಗ ಸುಲಭವಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಅಸಮಾಧಾನ ವ್ಯಕ್ತಪಡಿಸಿದರು.
“ನಾವು ಸಾಮಾನ್ಯ ಜನರ ಹಿತದೃಷ್ಟಿಯಿಂದ ಸಲ್ಲಿಸುವ ನೈಜ ಅರ್ಜಿಗಳನ್ನು ಮಾತ್ರ ಪುರಸ್ಕರಿಸುತ್ತೇವೆ. ವೈಯಕ್ತಿಕ ಲಾಭ ಅಥವಾ ಪ್ರಚಾರಕ್ಕಾಗಿ ಸಲ್ಲಿಸುವ ಅರ್ಜಿಗಳನ್ನು ಕಸದ ಬುಟ್ಟಿಗೆ ಎಸೆಯಬೇಕು” ಎಂದು ಪೀಠವು ಅಭಿಪ್ರಾಯಪಟ್ಟಿದೆ.
2006ರಲ್ಲಿ ಸಲ್ಲಿಸಲಾಗಿದ್ದ ಶಬರಿಮಲೆ ಅರ್ಜಿಯ ಮೂಲ ಆಧಾರಗಳನ್ನು ಪ್ರಶ್ನಿಸಿದ ನ್ಯಾಯಾಲಯ, ಯಾವುದೇ ಬದ್ಧತೆ ಇಲ್ಲದ ಸಂಸ್ಥೆಗಳು ಇಂತಹ ಅರ್ಜಿಗಳನ್ನು ಸಲ್ಲಿಸುತ್ತಿರುವುದು ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡುತ್ತಿವೆ ಎಂದು ಹೇಳಿದೆ.








