ಬೆಂಗಳೂರು: ಪತಿಯು ಅಕ್ರಮ ಸಂಬಂಧ ಹೊಂದಿರುವ ಕಾರಣಕ್ಕೆ ಪತ್ನಿ ಆತನಿಂದ ದೂರ ವಾಸಿಸುತ್ತಿದ್ದರೆ, ಅದನ್ನು ಪತ್ನಿ ಮಾಡಿದ ‘ಪರಿತ್ಯಾಗ’ (Desertion) ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬೀದರ್ನ ಕೌಟುಂಬಿಕ ನ್ಯಾಯಾಲಯವು ನೀಡಿದ್ದ ವಿಚ್ಛೇದನ ಆದೇಶವನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಮತ್ತು ನ್ಯಾಯಮೂರ್ತಿ ಚಿಲ್ಲಾಕೂರು ಸುಮಲತಾ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ಪ್ರಕಟಿಸಿದೆ.
ಪ್ರಕರಣದ ಹಿನ್ನೆಲೆ
ಬೀದರ್ ನ ಕೌಟುಂಬಿಕ ನ್ಯಾಯಾಲಯವು ಈ ಹಿಂದೆ ಪತಿಯ ಪರವಾಗಿ ವಿಚ್ಛೇದನ ನೀಡಿ ಆದೇಶಿಸಿತ್ತು. ಪತ್ನಿಯು ತನ್ನನ್ನು ಪರಿತ್ಯಾಗ ಮಾಡಿದ್ದಾರೆ ಮತ್ತು ಕ್ರೌರ್ಯ ಎಸಗಿದ್ದಾರೆ ಎಂಬ ಪತಿಯ ವಾದವನ್ನು ಕೆಳಹಂತದ ನ್ಯಾಯಾಲಯ ಪುರಸ್ಕರಿಸಿತ್ತು. ಆದರೆ ಇದನ್ನು ತಳ್ಳಿಹಾಕಿದ ಹೈಕೋರ್ಟ್, ಕೆಳಹಂತದ ನ್ಯಾಯಾಲಯವು ಕೇವಲ ಪತಿಯ ಮೌಖಿಕ ಹೇಳಿಕೆಗಳನ್ನು ಆಧರಿಸಿ ತೀರ್ಪು ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಪತಿಯು ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವಾಗ, ಪತ್ನಿಯು ಆತನಿಂದ ದೂರವಿರಲು ಬಲವಾದ ಮತ್ತು ಕಾನೂನುಬದ್ಧ ಕಾರಣವಿರುತ್ತದೆ. ಇಂತಹ ಸಂದರ್ಭದಲ್ಲಿ ಆಕೆಯನ್ನು ‘ಪರಿತ್ಯಾಗ ಮಾಡಿದವಳು’ ಎಂದು ಕರೆಯುವುದು ತಪ್ಪು.
ಪತಿಯ ಅಕ್ರಮ ಸಂಬಂಧಕ್ಕೆ ಪುರಾವೆಯಾಗಿ ಆ ಸಂಬಂಧದಿಂದ ಜನಿಸಿದ ಮಗುವಿನ ಶಾಲಾ ದಾಖಲಾತಿಗಳು ಮತ್ತು ಭಾವಚಿತ್ರಗಳನ್ನು ಪತ್ನಿ ನ್ಯಾಯಾಲಯಕ್ಕೆ ಒದಗಿಸಿದ್ದರು. ಈ ಗಂಭೀರ ಅಂಶವನ್ನು ಕೌಟುಂಬಿಕ ನ್ಯಾಯಾಲಯವು ಪರಿಗಣಿಸದಿರುವುದು ಸರಿಯಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪತ್ನಿಯು ತನಗೆ ‘ಎಚ್ಐವಿ’ ಇದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಪತಿಯ ಆರೋಪಕ್ಕೆ ಯಾವುದೇ ದೃಢವಾದ ಸಾಕ್ಷ್ಯಗಳಿರಲಿಲ್ಲ. ಇಂತಹ ಗಂಭೀರ ಆರೋಪಗಳನ್ನು ಕೇವಲ ಮೌಖಿಕ ಹೇಳಿಕೆಗಳ ಆಧಾರದ ಮೇಲೆ ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.ಸಾಕ್ಷ್ಯಗಳ ಕೊರತೆಯ ನಡುವೆಯೂ ವಿಚ್ಛೇದನ ನೀಡಿರುವುದು ನ್ಯಾಯಸಮ್ಮತವಲ್ಲ ಎಂದು ಹೇಳಿದ ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.








