ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮತ ಎಣಿಕೆಯ ಆರಂಭಿಕ ಟ್ರೆಂಡ್ಗಳಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿ, ತೃಣಮೂಲ ಕಾಂಗ್ರೆಸ್ ಮುಖಭಂಗ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೊದಲ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕೊನೆಯ ಮತ ಎಣಿಕೆಯಾಗುವವರೆಗೂ ಯಾವುದೇ ಕಾರಣಕ್ಕೂ ಮತ ಎಣಿಕೆ ಕೇಂದ್ರಗಳನ್ನು ಬಿಟ್ಟು ಹೊರಬರಬೇಡಿ ಎಂದು ಅವರು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ:
ತಮ್ಮನ್ನು ಮತದಾನ ಕೇಂದ್ರಗಳಿಗೆ ಹೋಗದಂತೆ ಬಿಜೆಪಿ ತಡೆಯುತ್ತಿದೆ ಎಂದು ಆರೋಪಿಸಿದ ಅವರು, “ನಾನು ನಿನ್ನೆಯೇ ಹೇಳಿದ್ದೆ, ಮೊದಲ ಎರಡು ಮೂರು ಸುತ್ತುಗಳಲ್ಲಿ ಬಿಜೆಪಿಯೇ ಮುನ್ನಡೆಯಲ್ಲಿದೆ ಎಂದು ಅವರು ತೋರಿಸುತ್ತಾರೆ. ಸದ್ಯ ಸುಮಾರು 100 ಕಡೆಗಳಲ್ಲಿ ಮತ ಎಣಿಕೆಯನ್ನು ಸ್ಥಗಿತಗೊಳಿಸಲಾಗಿದೆ” ಎಂದು ದೂರಿದ್ದಾರೆ.
ತಮ್ಮ ಸ್ವಕ್ಷೇತ್ರವಾದ ಭವಾನಿಪುರದಲ್ಲಿ 8ನೇ ಸುತ್ತಿನ ಎಣಿಕೆಯ ನಂತರವೂ ಮಮತಾ ಬ್ಯಾನರ್ಜಿ ಅವರು ಶುಭೇಂದು ಅಧಿಕಾರಿ ವಿರುದ್ಧ 15,494 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಮಮತಾ 35,522 ಮತಗಳನ್ನು ಪಡೆದಿದ್ದು, ಇನ್ನೂ 12 ಸುತ್ತುಗಳ ಎಣಿಕೆ ಬಾಕಿ ಇದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಕಮ್ಬ್ಯಾಕ್ ಮಾಡುವುದು ಕಷ್ಟ ಎನ್ನಲಾಗುತ್ತಿದೆ.
ಧೈರ್ಯಗೆಡಬೇಡಿ: “ನಮ್ಮ ಅಭ್ಯರ್ಥಿಗಳು ಅಥವಾ ಎಣಿಕೆ ಏಜೆಂಟರು ಯಾವುದೇ ಕಾರಣಕ್ಕೂ ಎಣಿಕೆ ಕೇಂದ್ರಗಳನ್ನು ಬಿಟ್ಟು ಬರಬಾರದು ಎಂದು ನಾನು ಮನವಿ ಮಾಡುತ್ತೇನೆ. ನಾವಿನ್ನೂ 170 ಸೀಟುಗಳಲ್ಲಿ ಮುಂದಿದ್ದೇವೆ, ಯಾರು ಭರವಸೆ ಕಳೆದುಕೊಳ್ಳಬೇಡಿ” ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಮಾಹಿತಿ ಮುಚ್ಚಿಡುವಿಕೆ: “ನಾವು ಮುನ್ನಡೆ ಸಾಧಿಸಿರುವ ಸುಮಾರು 70 ರಿಂದ 100 ಕ್ಷೇತ್ರಗಳ ದತ್ತಾಂಶವನ್ನು (Data) ಅವರು ಹಂಚಿಕೊಳ್ಳುತ್ತಿಲ್ಲ. ಸುಳ್ಳು ನಿರೂಪಣೆಯನ್ನು (False narrative) ಹರಡಲಾಗುತ್ತಿದೆ” ಎಂದು ಆಪೋರಪಿಸಿದ್ದಾರೆ.
ಇವಿಎಂ ಅಕ್ರಮ: “ಕಲ್ಯಾಣಿಯಲ್ಲಿ 7 ಇವಿಎಂ ಯಂತ್ರಗಳಲ್ಲಿ ಭಾರಿ ವ್ಯತ್ಯಯ ಕಂಡುಬಂದಿದೆ. ಟಿಎಂಸಿ ಪ್ರಬಲವಾಗಿರುವ ಕಡೆಗಳಲ್ಲಿ ಮತದಾರರ ಪಟ್ಟಿಯನ್ನು ಉದ್ದೇಶಪೂರ್ವಕವಾಗಿ ಪರಿಷ್ಕರಿಸಲಾಗಿದೆ” ಎಂದು ಅವರು ಕಿಡಿಕಾರಿದ್ದಾರೆ.
ಕೇಂದ್ರ ಪಡೆಗಳ ಬಳಕೆ: ಕೇಂದ್ರ ಪಡೆಗಳ ಸಹಾಯದಿಂದ ಟಿಎಂಸಿ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಮತ್ತು ನಮ್ಮ ಪಕ್ಷದ ಕಚೇರಿಗಳನ್ನು ಧ್ವಂಸಗೊಳಿಸಿ ವಶಪಡಿಸಿಕೊಳ್ಳಲಾಗುತ್ತಿದೆ ಎಂದು ದೀದಿ ಆರೋಪಿಸಿದ್ದಾರೆ.








