ಶಿವಮೊಗ್ಗ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಕೂಡಲೇ ತುಟ್ಟಿಭತ್ಯೆ (DA) ಮಂಜೂರು ಮಾಡುವಂತೆ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್ ಎನ್ ಅವರು ರಾಜ್ಯ ಸರ್ಕಾರ ಹಾಗೂ ರಾಜ್ಯಾಧ್ಯಕ್ಷರಾದಂತ ಸಿಎಸ್ ಷಡಕ್ಷರಿ ಅವರಿಗೆ ಮನವಿ ಮಾಡಿದ್ದಾರೆ.
ಬೆಲೆ ಏರಿಕೆಯ ಬಿಸಿ
ದಿನಬಳಕೆಯ ವಸ್ತುಗಳಾದ ಅಕ್ಕಿ, ಬೇಳೆ, ತರಕಾರಿ, ಹಾಲು ಮತ್ತು ಅಡುಗೆ ಅನಿಲದ ದರಗಳು ಶೇ. 30 ರಿಂದ 40 ರಷ್ಟು ಹೆಚ್ಚಳವಾಗಿದ್ದು, ನೌಕರರ ಬಜೆಟ್ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ನೌಕರರು, ಶಿಕ್ಷಕರು ಹಾಗೂ ಪಿಂಚಣಿದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರದ ಮಾದರಿಯಲ್ಲೇ ಜಾರಿಗೊಳಿಸಿ
ಕೇಂದ್ರ ಸರ್ಕಾರವು ಈಗಾಗಲೇ ತನ್ನ ನೌಕರರಿಗೆ ಜನವರಿ 2026 ರಿಂದ ಅನ್ವಯವಾಗುವಂತೆ ಶೇ. 2 ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಇದೇ ಮಾದರಿಯನ್ನು ರಾಜ್ಯ ಸರ್ಕಾರವೂ ಅನುಸರಿಸಬೇಕು ಎಂದು ಸರ್ಕಾರಕ್ಕೆ ಹಾಗೂ ರಾಜ್ಯಾಧ್ಯಕ್ಷ ಸಿಎಸ್ ಷಡಕ್ಷರಿ ಅವರಲ್ಲಿ ಕೋರಿದ್ದಾರೆ.
ಪ್ರಮುಖ ಬೇಡಿಕೆಗಳೇನು?:
-
ಶೇ. 2ರಷ್ಟು ಹೆಚ್ಚಳ: ಪ್ರಸ್ತುತ ಇರುವ ತುಟ್ಟಿಭತ್ಯೆಗೆ ಹೆಚ್ಚುವರಿಯಾಗಿ ಶೇ. 2 ರಷ್ಟು DA ಅನ್ನು ದಿನಾಂಕ 01-01-2026 ರಿಂದ ಪೂರ್ವಾನ್ವಯವಾಗುವಂತೆ ಮಂಜೂರು ಮಾಡಬೇಕು.
-
ಬಾಕಿ ನಗದು ಪಾವತಿ: ಕೇಂದ್ರ ಸರ್ಕಾರದ ಮಾದರಿಯಲ್ಲಿಯೇ ಬಾಕಿ ಇರುವ ತುಟ್ಟಿಭತ್ಯೆಯನ್ನು (Arrears) ನಗದು ರೂಪದಲ್ಲಿ ಪಾವತಿಸಬೇಕು.
ನ್ಯಾಯಯುತ ಬೇಡಿಕೆಗೆ ಸ್ಪಂದಿಸಿ
ಸಾಗರ ತಾಲ್ಲೂಕಿನ ಸಮಸ್ತ ಸರ್ಕಾರಿ ನೌಕರರ ಪರವಾಗಿ ಮಾತನಾಡಿರುವ ಸಂತೋಷ್ ಕುಮಾರ್ ಎನ್., ನೌಕರರ ಕುಟುಂಬಗಳ ಹಿತದೃಷ್ಟಿಯಿಂದ ಸರ್ಕಾರವು ಈ ನ್ಯಾಯಯುತ ಬೇಡಿಕೆಯನ್ನು ಶೀಘ್ರವಾಗಿ ಈಡೇರಿಸಬೇಕು. ಆರ್ಥಿಕ ಅನಿಶ್ಚಿತತೆಯ ಈ ಕಾಲದಲ್ಲಿ ಸರ್ಕಾರಿ ನೌಕರರಿಗೆ ಈ ಬೆಂಬಲ ಅತ್ಯಗತ್ಯ ಎಂದು ಸರ್ಕಾರಕ್ಕೆ ಸವಿನಯ ಪ್ರಾರ್ಥನೆ ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ನೌಕರರು ಈ ಆದೇಶಕ್ಕಾಗಿ ಕಾತರದಿಂದ ಕಾಯುತ್ತಿದ್ದು, ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವನ್ನು ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದಂತ ಸಂತೋಷ್ ಕುಮಾರ್.ಎನ್ ಅವರು ವ್ಯಕ್ತಪಡಿಸಿದ್ದಾರೆ.








