ಕೇಪ್ ವರ್ಡೆ (ಪಶ್ಚಿಮ ಆಫ್ರಿಕಾ):ಅರ್ಜೆಂಟೀನಾದಿಂದ ಕೇಪ್ ವರ್ಡೆಗೆ ಸಂಚರಿಸುತ್ತಿದ್ದ ‘ಎಂವಿ ಹೊಂಡಿಯಸ್’ (MV Hondius) ಎಂಬ ನೆದರ್ಲೆಂಡ್ಸ್ ಮೂಲದ ಪ್ರವಾಸಿ ಹಡಗಿನಲ್ಲಿ ಹಂಟಾವೈರಸ್ ಸೋಂಕು ಕಾಣಿಸಿಕೊಂಡಿದೆ. ಈ ಮಾರಕ ಸೋಂಕಿನಿಂದಾಗಿ ಹಡಗಿನಲ್ಲಿದ್ದ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ದಕ್ಷಿಣ ಆಫ್ರಿಕಾದ ಆರೋಗ್ಯ ಇಲಾಖೆ ದೃಢಪಡಿಸಿದೆ.
ಮೃತಪಟ್ಟವರಲ್ಲಿ ನೆದರ್ಲೆಂಡ್ಸ್ನ ವೃದ್ಧ ದಂಪತಿ ಸೇರಿದ್ದಾರೆ. ಪತಿ ಹಡಗಿನಲ್ಲೇ ಮೃತಪಟ್ಟರೆ, ಪತ್ನಿ ದಕ್ಷಿಣ ಆಫ್ರಿಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಪ್ರಜೆ ಹಡಗಿನಲ್ಲೇ ಮೃತಪಟ್ಟಿದ್ದಾರೆ.
ಹಡಗಿನಲ್ಲಿದ್ದ ಉಳಿದ 160ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದು, ತೀವ್ರ ನಿಗಾ ವಹಿಸಲಾಗಿದೆ.
ಹಂಟಾವೈರಸ್ ಇಂದು ನಿನ್ನೆಯದಲ್ಲ, ಇದರ ಇತಿಹಾಸ ದಶಕಗಳಷ್ಟು ಹಳೆಯದು:
1950ರ ದಶಕದ ನಂಟು: ಈ ವೈರಸ್ ಮೊದಲ ಬಾರಿಗೆ 1950ರ ದಶಕದಲ್ಲಿ ಕೊರಿಯಾ ಯುದ್ಧದ ಸಮಯದಲ್ಲಿ ವಿಶ್ವದ ಗಮನ ಸೆಳೆದಿತ್ತು. ಆಗ 3000ಕ್ಕೂ ಹೆಚ್ಚು ಸೈನಿಕರು ‘ಹೆಮೊರಾಜಿಕ್ ಫೀವರ್’ನಿಂದ ಬಳಲಿದ್ದರು.
ಹಾಲವುಡ್ ನಟನ ಪತ್ನಿ ಸಾವು: ಕಳೆದ ವರ್ಷ (2025ರಲ್ಲಿ) ಪ್ರಖ್ಯಾತ ಹಾಲವುಡ್ ನಟ ಜೀನ್ ಹ್ಯಾಕ್ಮನ್ (Gene Hackman) ಅವರ ಪತ್ನಿ ಬೆಟ್ಸಿ ಅರಕಾವಾ ಅವರು ಇದೇ ಹಂಟಾವೈರಸ್ ಸೋಂಕಿನಿಂದ ನ್ಯೂ ಮೆಕ್ಸಿಕೋದಲ್ಲಿ ಸಾವನ್ನಪ್ಪಿದ್ದರು. ಅರಕಾವಾ ಅವರ ಸಾವಿನ ಬೆನ್ನಲ್ಲೇ ಜೀನ್ ಹ್ಯಾಕ್ಮನ್ ಕೂಡ ಹೃದಯಾಘಾತದಿಂದ ನಿಧನರಾಗಿದ್ದರು.








