ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಇಂದು ಮಧ್ಯಾಹ್ನ ಒಂದು ಘೋರ ದುರಂತ ಸಂಭವಿಸಿದೆ. ನಗರದ ಐತಿಹಾಸಿಕ ಕಪಿಲೇಶ್ವರ ದೇವಸ್ಥಾನದ ಸಮೀಪವಿರುವ ಹೊಂಡದಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಜಲಸಮಾಧಿಯಾದ ಕರುಣಾಜನಕ ಘಟನೆ ನಡೆದಿದೆ.
ಮೃತರ ಗುರುತು: ಮೃತಪಟ್ಟ ಬಾಲಕರನ್ನು ಶಿವಾಜಿನಗರದ ಶಿವಂ ಪರಶುರಾಮ್ ಸಂಡೇಕರ್ (7) ಶಹಪುರದಲ್ಲಿಯ ಪರಶುರಾಮ್ ರಾಜು ನಿಲಾಸ್ಕರ್ (11) ಮತ ಬಾಲಕರು ಎಂದು ತಿಳಿದು ಬಂದಿದೆ ಘಟನೆ ಕುರಿತು ಖಡೆ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರಜೆಯ ಮೋಜಿನಲ್ಲಿದ್ದ ಬಾಲಕರು ಈಜಾಡಲು ಹೊಂಡಕ್ಕೆ ಇಳಿದಿದ್ದರು. ಆದರೆ ನೀರಿನ ಆಳ ಮತ್ತು ಸುಳಿಯ ಅಂದಾಜು ಸಿಗದೆ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡ: ಘಟನೆ ಸಂಭವಿಸುತ್ತಿದ್ದಂತೆಯೇ ಸ್ಥಳೀಯರು ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ SDRF (ರಾಜ್ಯ ವಿಪತ್ತು ಸ್ಪಂದನಾ ಪಡೆ) ತಂಡ ಸ್ಥಳಕ್ಕೆ ಧಾವಿಸಿದ್ದು, ಮೃತದೇಹಗಳಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹೊಂಡದಲ್ಲಿ ಹೂಳು ಹೆಚ್ಚಿರುವುದರಿಂದ ಕಾರ್ಯಾಚರಣೆಗೆ ಸಲ್ಪ ಅಡ್ಡಿಯಾಗಿದೆ ಎಂದು ತಿಳಿದುಬಂದಿದೆ.
ಪೋಷಕರ ಆಕ್ರಂದನ: ತಮ್ಮ ಮಕ್ಕಳು ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಪೋಷಕರು ಸ್ಥಳಕ್ಕೆ ಧಾವಿಸಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. “ನನ್ನ ಮಗ ಇನ್ನು ಬರುವುದಿಲ್ಲವೇ?” ಎಂದು ಗೋಳಿಡುತ್ತಿರುವ ಪೋಷಕರನ್ನು ಸಮಾಧಾನಪಡಿಸುವುದು ಪೊಲೀಸರಿಗೆ ಹಾಗೂ ಸಾರ್ವಜನಿಕರಿಗೆ ಕಷ್ಟಸಾಧ್ಯವಾಗಿತ್ತು. ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ನೂರಾರು ಜನರು ಜಮಾಯಿಸಿದ್ದಾರೆ.








