ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ ನಡೆದಿದ್ದು, ಪೂಜೆ ಮತ್ತು ದೀಕ್ಷೆಯ ನೆಪದಲ್ಲಿ ಬ್ಯೂಟಿಷಿಯನ್ ಒಬ್ಬರ ಮೇಲೆ ಜ್ಯೋತಿಷಿಯೊಬ್ಬ ನಿರಂತರವಾಗಿ ಅತ್ಯಾಚಾರ ಎಸಗಿರುವ ಘನಘೋರ ಘಟನೆಯೊಂದು ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಘಟನೆಯ ಹಿನ್ನೆಲೆ:
ರಾಜಾಜಿನಗರದಲ್ಲಿ ಬ್ಯೂಟಿಷಿಯನ್ ಟ್ರೈನಿಂಗ್ ಸೆಂಟರ್ ನಡೆಸುತ್ತಿದ್ದ ಮಹಿಳೆಗೆ, ಆರೋಪಿ ಮೋಹನ್ ಕುಮಾರ್ ಎಂಬಾತ ತನ್ನ ಸಹೋದರಿಯ ಅಡ್ಮಿಷನ್ ನೆಪದಲ್ಲಿ ಪರಿಚಯವಾಗಿದ್ದನು. ಮಹಿಳೆಯ ಆರ್ಥಿಕ ಅಭಿವೃದ್ಧಿಗಾಗಿ ಪೂಜೆ ಮಾಡಿಸಬೇಕು ಎಂದು ನಂಬಿಸಿದ್ದ ಈತ, ಆಕೆಯನ್ನು ನಂಬಿಸಿ ವಂಚಿಸಿದ್ದಾನೆ.
ಜೂನ್ 30, 2025 ರಂದು ರಾಮನಗರದ ಪಿರಮಿಡ್ ವ್ಯಾಲಿಗೆ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದನು. ನಂತರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪೂಜೆಗೆಂದು ಕರೆದೊಯ್ದು, ವಾಪಸ್ಸಾಗುವಾಗ ಕಾರಿನಲ್ಲಿಯೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಫೆಬ್ರವರಿ 10ರಂದು ದೀಕ್ಷೆ ನೀಡುವ ನೆಪದಲ್ಲಿ ಮಹಿಳೆಯ ಮನೆಗೆ ಬಂದಿದ್ದ ಆರೋಪಿ, ಪತಿ ಮತ್ತು ಮಗನನ್ನು ಮನೆಯಿಂದ ಹೊರಗೆ ಕಳುಹಿಸಿ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ್ದಾನೆ.
ವಾಮಾಚಾರದ ಭೀತಿ ಮತ್ತು ಬೆದರಿಕೆ:
ತನ್ನ ಕಾಮದ ಹಸಿವು ತೀರಿಸಿಕೊಳ್ಳಲು ಆರೋಪಿ ಅಮಾನವೀಯ ಹಾದಿ ತುಳಿದಿದ್ದನು. “ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ, ನಿನ್ನ ಪತಿ ಮತ್ತು ಮಗನ ಮೇಲೆ ವಾಮಾಚಾರ ಮಾಡಿಸಿ ಅವರು ರಕ್ತ ಕಾರಿ ಸಾಯುವಂತೆ ಮಾಡುತ್ತೇನೆ” ಎಂದು ಮಹಿಳೆಯನ್ನು ಬೆದರಿಸಿದ್ದನು. ಕುಟುಂಬದವರ ಜೀವಕ್ಕೆ ಅಪಾಯವಾಗಬಹುದು ಎಂಬ ಭೀತಿಯಿಂದ ಮಹಿಳೆ ಇಷ್ಟು ದಿನ ಮೌನವಾಗಿದ್ದರು ಎನ್ನಲಾಗಿದೆ.
ಪೊಲೀಸ್ ತನಿಖೆ:
ಆರೋಪಿ ಮೋಹನ್ ಕುಮಾರ್ನ ಕಿರುಕುಳ ಸಹಿಸಲಾರದೆ ಸಂತ್ರಸ್ತೆ ಇದೀಗ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳುತ್ತಿದ್ದಂತೆಯೇ ಆರೋಪಿ ಪರಾರಿಯಾಗಿದ್ದು, ಸದ್ಯ ಪೊಲೀಸರು ಆತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.








