ಜೋಯಿಡಾ: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳಲ್ಲಿಯೂ ಹೃದಯಾಘಾತ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಪೂರಕವೆಂಬಂತೆ, ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ 7ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿರುವ ಧಾರುಣ ಘಟನೆ ವರದಿಯಾಗಿದೆ.
ಘಟನೆಯ ವಿವರ:
ಜೋಯಿಡಾ ತಾಲೂಕಿನ ಚಾಪಾಲಿ ಗವಳಿವಾಡ ನಿವಾಸಿ ಗಂಗು ಗವಳಿ ಮೃತಪಟ್ಟ ವಿದ್ಯಾರ್ಥಿನಿ. 13 ವರ್ಷದ ಈ ಬಾಲಕಿ ಎಂದಿನಂತೆ ಲವಲವಿಕೆಯಿಂದ ಇದ್ದು, ಸಾವಿಗೂ ಮುನ್ನಾದಿನ ಸಂಜೆವರೆಗೂ ಆಟವಾಡಿಕೊಂಡಿದ್ದಳು. ಆದರೆ ಮರುದಿನ ಮುಂಜಾನೆ ದಿಢೀರನೆ ವಾಂತಿ ಮಾಡಿಕೊಂಡ ಬಾಲಕಿ, ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾಳೆ.
ಯಾವುದೇ ಕಾಯಿಲೆ ಇರಲಿಲ್ಲ:
ಗಂಗು ಗವಳಿಗೆ ಈ ಹಿಂದೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿರಲಿಲ್ಲ ಅಥವಾ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಆರೋಗ್ಯವಂತವಾಗಿದ್ದ ಮಗು ಹೀಗೆ ದಿಢೀರನೆ ಸಾವನ್ನಪ್ಪಿರುವುದು ಪೋಷಕರನ್ನು ಹಾಗೂ ಗ್ರಾಮಸ್ಥರನ್ನು ಕಣ್ಣೀರಲ್ಲಿ ಮುಳುಗಿಸಿದೆ.








