ಟೆಹ್ರಾನ್/ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಎದ್ದಿರುವ ಯುದ್ಧದ ಕಿಚ್ಚನ್ನು ಆರಿಸಲು ಇರಾನ್ ಮಹತ್ವದ ಹೆಜ್ಜೆ ಇಟ್ಟಿದೆ. ಪಾಕಿಸ್ತಾನವನ್ನು ಸಂಧಾನಕಾರನನ್ನಾಗಿ (Intermediary) ಬಳಸಿಕೊಂಡು, ಅಮೆರಿಕಕ್ಕೆ 14 ಅಂಶಗಳ ಹೊಸ ಪ್ರತ್ಯುತ್ತರ ಪ್ರಸ್ತಾವನೆಯನ್ನು ರವಾನಿಸಿದೆ. ಇರಾನ್ನ ಈ ನಡೆ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.
ವರದಿಯ ಪ್ರಕಾರ, ಇರಾನ್ನ 14 ಅಂಶಗಳ ಯೋಜನೆಯು ಈ ಕೆಳಗಿನ ಪ್ರಮುಖ ಬೇಡಿಕೆಗಳನ್ನು ಒಳಗೊಂಡಿದೆ:
ಸಂಪೂರ್ಣ ಯುದ್ಧ ವಿರಾಮ: ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿ ನಡೆಯುತ್ತಿರುವ ಯುದ್ಧವನ್ನು ತಕ್ಷಣವೇ ಮತ್ತು ಶಾಶ್ವತವಾಗಿ ಕೊನೆಗೊಳಿಸಬೇಕು.
30 ದಿನಗಳ ಡೆಡ್ಲೈನ್: ಅಮೆರಿಕವು ಎರಡು ತಿಂಗಳ ಯುದ್ಧ ವಿರಾಮಕ್ಕೆ ಪ್ರಸ್ತಾವನೆ ನೀಡಿತ್ತು. ಆದರೆ ಇರಾನ್, ಎಲ್ಲಾ ಸಮಸ್ಯೆಗಳನ್ನು ಕೇವಲ 30 ದಿನಗಳ ಒಳಗಾಗಿ ಪರಿಹರಿಸಬೇಕು ಎಂದು ಪಟ್ಟು ಹಿಡಿದಿದೆ.
ಸೇನೆ ಹಿಂತೆಗೆತ: ಇರಾನ್ ಗಡಿಯ ಸುತ್ತಮುತ್ತಲಿನ ಪ್ರದೇಶಗಳಿಂದ ಅಮೆರಿಕ ತನ್ನ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು.
ಆರ್ಥಿಕ ದಿಗ್ಬಂಧನ ತೆರವು: ಇರಾನ್ ಮೇಲೆ ಹೇರಲಾಗಿರುವ ಎಲ್ಲಾ ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕಬೇಕು ಮತ್ತು ಅಮೆರಿಕ ಮುಟ್ಟುಗೋಲು ಹಾಕಿಕೊಂಡಿರುವ ಇರಾನ್ನ ಆಸ್ತಿಗಳನ್ನು ಬಿಡುಗಡೆ ಮಾಡಬೇಕು.
ಹಾರ್ಮುಜ್ ಜಲಸಂಧಿ: ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಹೊಸದೊಂದು ಆಡಳಿತಾತ್ಮಕ ವ್ಯವಸ್ಥೆಯನ್ನು ಜಾರಿಗೆ ತರಬೇಕು.








