ಜಬಲ್‌ಪುರ: ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ಬರ್ಗಿ ಅಣೆಕಟ್ಟಿನ ಜಲಾಶಯದಲ್ಲಿ ಗುರುವಾರ ಸಂಭವಿಸಿದ ಪ್ರವಾಸಿ ಬೋಟ್ ದುರಂತದ ಭೀಕರತೆ ಹೆಚ್ಚಾಗುತ್ತಿದ್ದು, ಶನಿವಾರ ಸಂಜೆ ಮತ್ತಿಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ಇದರೊಂದಿಗೆ ಈ ಭೀಕರ ಘಟನೆಯಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಏಪ್ರಿಲ್ 30ರಂದು ಮಧ್ಯಪ್ರದೇಶ ಪ್ರವಾಸೋದ್ಯಮ ಇಲಾಖೆಯ ‘ಕ್ರೂಸ್ ಬೋಟ್’ ಸುಮಾರು 41 ಮಂದಿ ಪ್ರವಾಸಿಗರನ್ನು ಹೊತ್ತು ಸಾಗುತ್ತಿದ್ದಾಗ ಹಠಾತ್ ಬೀಸಿದ ಬಿರುಗಾಳಿ ಮತ್ತು ಚಂಡಮಾರುತಕ್ಕೆ ಸಿಲುಕಿ ಜಲಾಶಯದ ಮಧ್ಯೆ ಮಗುಚಿತ್ತು.
ಶನಿವಾರ ಸಂಜೆ 5 ವರ್ಷದ ವಿರಾಜ್ ಸೋನಿ ಮತ್ತು ತಮಿಳ್ ಎಂಬ ಇಬ್ಬರು ಬಾಲಕರ ಮೃತದೇಹಗಳು ಪತ್ತೆಯಾಗಿವೆ.
ಎನ್‌ಡಿಆರ್‌ಎಫ್ (NDRF), ಎಸ್‌ಡಿಆರ್‌ಎಫ್ (SDRF) ಮತ್ತು ಭಾರತೀಯ ಸೇನೆಯ ನುರಿತ ಡೈವರ್‌ಗಳು ಕಳೆದ ಮೂರು ದಿನಗಳಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನೂ ಇಬ್ಬರು ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದಿದೆ.ಈವರೆಗೆ ಒಟ್ಟು 28 ಜನರನ್ನು ರಕ್ಷಿಸಲಾಗಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.








