ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೋರ್ ತಾಲೂಕಿನ ನಸ್ರಾಪುರ ಗ್ರಾಮದಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘೋರ ಘಟನೆಯೊಂದು ನಡೆದಿದೆ. ಕೇವಲ ನಾಲ್ಕು ವರ್ಷದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 65 ವರ್ಷದ ವೃದ್ಧನನ್ನು ಬಂಧಿಸಿದ್ದಾರೆ.
ಆರೋಪಿಯು ಅಮಾಯಕ ಮಗುವನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಲ್ಲದೆ, ಸಾಕ್ಷ್ಯ ನಾಶಪಡಿಸಲು ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ನಂತರ ಮಗುವಿನ ಶವವನ್ನು ಕೊಟ್ಟಿಗೆಯೊಂದರಲ್ಲಿ ಬಚ್ಚಿಟ್ಟಿದ್ದ ಎಂದು ತಿಳಿದುಬಂದಿದೆ. ಘಟನೆ ತಿಳಿಯುತ್ತಿದ್ದಂತೆ ಗ್ರಾಮಸ್ಥರು ರೊಚ್ಚಿಗೆದ್ದು ಬೃಹತ್ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಸ್ಥಳೀಯ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಆರೋಪಿಗೆ ಗಲ್ಲು ಶಿಕ್ಷೆಗೆ ಶಾಸಕ ರೋಹಿತ್ ಪವಾರ್ ಆಗ್ರಹ
ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಎನ್‌ಸಿಪಿ (ಶರದ್ ಪವಾರ್ ಬಣ) ಶಾಸಕ ರೋಹಿತ್ ಪವಾರ್, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ. “ಇಂತಹ ಕ್ರೂರಿಗೆ ಗಲ್ಲು ಶಿಕ್ಷೆಯಾಗಬೇಕು. ಆಗ ಮಾತ್ರ ಕಾಮುಕರಲ್ಲಿ ಭಯ ಹುಟ್ಟಲು ಸಾಧ್ಯ. ಈ ಆರೋಪಿ ಈ ಹಿಂದೆ ಕೂಡ ಇಬ್ಬರು-ಮೂವರು ಬಾಲಕಿಯರ ಮೇಲೆ ಇಂತಹದ್ದೇ ಕೃತ್ಯ ಎಸಗಿದ್ದ ಎಂಬ ಮಾಹಿತಿ ಇದೆ. ರಾಜ್ಯದಲ್ಲಿ ಪ್ರತಿ ಗಂಟೆಗೆ ಒಂದು ಅತ್ಯಾಚಾರ ಪ್ರಕರಣ ದಾಖಲಾಗುತ್ತಿರುವುದು ನಾಚಿಕೆಗೇಡಿನ ಸಂಗತಿ. ಸರ್ಕಾರ ಕೂಡಲೇ ‘ಶಕ್ತಿ ಕಾಯ್ದೆ’ಯನ್ನು ಜಾರಿಗೆ ತರಬೇಕು,” ಎಂದು ಅವರು ಎಕ್ಸ್ (X) ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
भोर तालुक्यातील नसरापूर गावात चार वर्षीय चिमुकलीवर अत्याचार करून दगडाने ठेचून हत्या केल्याची घटना अत्यंत भयावह आहे. ही केस तत्काळ फास्ट ट्रॅक कोर्टात चालवून या नराधमाला कठोरात कठोर अशी फाशीचीच शिक्षा द्यावी, तरच अशा नराधमांना चाप बसेल. या नराधमाने याआधीही दोन तीन चिमुकलींवर…
— Rohit Pawar (@RRPSpeaks) May 2, 2026








