ಜಿನೀವಾ: ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ಕೇವಲ ಪ್ರಕೃತಿಯ ಮೇಲೆ ಮಾತ್ರವಲ್ಲ, ನೇರವಾಗಿ ನಮ್ಮ ಮೆದುಳಿನ ಮೇಲೂ ಪರಿಣಾಮ ಬೀರುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಸ್ಟ್ರೋಕ್ (ಪಾರ್ಶ್ವವಾಯು) ಅಪಾಯ ಹೆಚ್ಚುತ್ತಿದ್ದು, ಇದು ಹೆಚ್ಚು ಮಾರಕವಾಗುತ್ತಿದೆ ಎಂದು ವಿಶ್ವ ಸ್ಟ್ರೋಕ್ ಸಂಸ್ಥೆ (WSO) ಎಚ್ಚರಿಸಿದೆ.
ತಾಪಮಾನ ಹೆಚ್ಚಾದಾಗ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ (Dehydration). ಇದರಿಂದ ರಕ್ತವು ದಪ್ಪವಾಗಿ (Thickening), ಮೆದುಳಿಗೆ ರಕ್ತ ಪೂರೈಸುವ ನರಗಳಲ್ಲಿ ರಕ್ತ ಹೆಪ್ಪುಗಟ್ಟುವ (Blood Clots) ಸಾಧ್ಯತೆ ಹೆಚ್ಚಾಗುತ್ತದೆ. ಇದು ಸ್ಟ್ರೋಕ್‌ಗೆ ಪ್ರಮುಖ ಕಾರಣ.
ಕಾಡ್ಗಿಚ್ಚು, ಧೂಳಿನ ಬಿರುಗಾಳಿ ಮತ್ತು ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದ ಸಣ್ಣ ಕಣಗಳು ಶ್ವಾಸಕೋಶದ ಮೂಲಕ ರಕ್ತಕ್ಕೆ ಸೇರಿ ರಕ್ತನಾಳಗಳನ್ನು ಹಾನಿಗೊಳಿಸುತ್ತವೆ. ವಿಶ್ವಾದ್ಯಂತ ಶೇ. 20 ಕ್ಕೂ ಹೆಚ್ಚು ಸ್ಟ್ರೋಕ್‌ಗಳಿಗೆ ವಾಯು ಮಾಲಿನ್ಯವೇ ಕಾರಣ ಎಂದು ವರದಿ ಹೇಳಿದೆ.
ದಿಢೀರನೆ ಉಂಟಾಗುವ ತಾಪಮಾನದ ಬದಲಾವಣೆ ಮತ್ತು ಆರ್ದ್ರತೆ (Humidity) ರಕ್ತದೊತ್ತಡವನ್ನು (Blood Pressure) ಏರುಪೇರು ಮಾಡುತ್ತದೆ. ಇದು ಮೆದುಳಿನ ನರಗಳು ಒಡೆಯಲು ಅಥವಾ ಬ್ಲಾಕ್ ಆಗಲು ದಾರಿಯಾಗುತ್ತದೆ.
ಹಿರಿಯ ನಾಗರಿಕರು, ಹೊರಗಡೆ ಕೆಲಸ ಮಾಡುವ ಕಾರ್ಮಿಕರು ಮತ್ತು ಸರಿಯಾದ ಆರೋಗ್ಯ ಸೌಲಭ್ಯವಿಲ್ಲದ ಮಧ್ಯಮ ವರ್ಗದ ಜನರಿಗೆ ಈ ಹವಾಮಾನ ವೈಪರೀತ್ಯದ ಹೊಡೆತ ಅತಿ ಹೆಚ್ಚಾಗಿದೆ.







