ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ನಿಗಮವು (ಬೆಸ್ಕಾಂ) ಗೃಹ ಬಳಕೆದಾರರಿಗೆ ಪ್ರತಿ ಯೂನಿಟ್ಗೆ ಒಟ್ಟು 91 ಪೈಸೆ ದರ ಹೆಚ್ಚಳ ಮಾಡಿದ್ದು, ಮೇ ತಿಂಗಳಿನಿಂದಲೇ ಈ ಹೊಸ ದರ ಜಾರಿಗೆ ಬರಲಿದೆ.
ಈಗಾಗಲೇ ಏಪ್ರಿಲ್ ತಿಂಗಳಿನಿಂದ ಪ್ರತಿ ಯೂನಿಟ್ಗೆ 35 ಪೈಸೆ ಏರಿಕೆ ಮಾಡಲಾಗಿತ್ತು. ಪ್ರಸ್ತುತ ಮೇ ತಿಂಗಳಿನಿಂದ ‘ಟ್ರೂ ಅಪ್ ಚಾರ್ಜ್’ ಹೆಸರಿನಲ್ಲಿ ಹೆಚ್ಚುವರಿಯಾಗಿ 56 ಪೈಸೆ ದರ ವಿಧಿಸಲಾಗುತ್ತಿದೆ.ಒಟ್ಟಾರೆಯಾಗಿ ಗ್ರಾಹಕರು ಪ್ರತಿ ಯೂನಿಟ್ಗೆ 91 ಪೈಸೆ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ.
ವಾಣಿಜ್ಯ ಬಳಕೆದಾರರಿಗೆ ‘ಡಬಲ್’ ಹೊರೆ:
ಗೃಹ ಬಳಕೆದಾರರಿಗಿಂತಲೂ ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರಿಗೆ ಈ ಬೆಲೆ ಏರಿಕೆ ಮತ್ತಷ್ಟು ಆಘಾತಕಾರಿಯಾಗಿದೆ. ವಿವಿಧ ವರ್ಗದ ವಾಣಿಜ್ಯ ಗ್ರಾಹಕರಿಗೆ ಪ್ರತಿ ಯೂನಿಟ್ಗೆ ₹1.10 ರಿಂದ ಗರಿಷ್ಠ ₹2.81 ರವರೆಗೆ ದರ ಹೆಚ್ಚಳವಾಗುವ ಸಾಧ್ಯತೆಯಿದೆ. ಕೆಇಆರ್ಸಿ (KERC) ಈಗಾಗಲೇ ಕೈಗಾರಿಕಾ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ದರವನ್ನು ಪರಿಷ್ಕರಿಸಲು ಅನುಮತಿ ನೀಡಿದೆ.
ಗೃಹಜ್ಯೋತಿ ಫಲಾನುಭವಿಗಳಿಗೆ ವಿನಾಯಿತಿ:
ಸರ್ಕಾರದ ‘ಗೃಹಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಗ್ರಾಹಕರಿಗೆ ಈ ದರ ಏರಿಕೆಯಿಂದ ಹೆಚ್ಚಿನ ತೊಂದರೆಯಾಗುವುದಿಲ್ಲ. 200 ಯೂನಿಟ್ಗಿಂತ ಕಡಿಮೆ ಬಳಕೆ ಮಾಡುವವರಿಗೆ ಯೋಜನೆಯ ಮಿತಿಯೊಳಗೆ ಉಚಿತ ವಿದ್ಯುತ್ ಲಭ್ಯವಿರಲಿದೆ. ಆದರೆ, ಮಿತಿ ಮೀರಿದ ಬಳಕೆಗೆ ಹೊಸ ದರ ಅನ್ವಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವ ಜಿಲ್ಲೆಗಳಿಗೆ ಅನ್ವಯ?
ಬೆಸ್ಕಾಂ ವ್ಯಾಪ್ತಿಗೆ ಒಳಪಡುವ ಒಟ್ಟು ಎಂಟು ಜಿಲ್ಲೆಗಳ ಗ್ರಾಹಕರಿಗೆ ಈ ಹೊರೆ ಬೀಳಲಿದೆ:
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ
ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ
ರಾಮನಗರ, ಚಿತ್ರದುರ್ಗ ಮತ್ತು ದಾವಣಗೆರೆ.








