ಬೆಂಗಳೂರು: ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (CET) ಸಂದರ್ಭದಲ್ಲಿ ಜನಿವಾರ ಮತ್ತು ಹಿಜಾಬ್ ವಿಚಾರವಾಗಿ ಉಂಟಾದ ಗೊಂದಲದಿಂದಾಗಿ ಸಮಸ್ಯೆಗೆ ಒಳಗಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸುವ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಆದರೆ, ಯಾವುದೇ ಕಾರಣಕ್ಕೂ ಕೃಪಾಂಕ (Grace Marks) ನೀಡಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಪರೀಕ್ಷಾ ಕೇಂದ್ರದಲ್ಲಿ ಜನಿವಾರ ತೆಗೆಯುವಂತೆ ಸೂಚಿಸಿದ್ದರಿಂದ ತೊಂದರೆ ಅನುಭವಿಸಿದ ನಾಲ್ವರು ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಪತ್ರ ಬರೆದಿದ್ದಾರೆ. ಈ ಘಟನೆಯಿಂದಾಗಿ ತಮಗೆ ಮಾನಸಿಕ ಕಿರಿಕಿರಿ ಉಂಟಾಗಿ ಪರೀಕ್ಷೆಯ ಮೇಲೆ ಗಮನಹರಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಕೃಪಾಂಕ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಹಿಜಾಬ್ ವಿಚಾರದ ವಿವಾದದಿಂದಾಗಿ ಓರ್ವ ವಿದ್ಯಾರ್ಥಿನಿ ಭೌತಶಾಸ್ತ್ರ ಪರೀಕ್ಷೆಯನ್ನು ಬರೆದಿಲ್ಲ. ಈ ಹಿನ್ನೆಲೆಯಲ್ಲಿ, ಬಾಧಿತ ವಿದ್ಯಾರ್ಥಿಗಳು ಬಯಸಿದರೆ ಮರು ಪರೀಕ್ಷೆಗೆ ಅವಕಾಶ ನೀಡುವ ಬಗ್ಗೆ ಸರ್ಕಾರ ಪರಿಶೀಲಿಸಲಿದೆ. ಕಾನೂನು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುವುದರಿಂದ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲು ಸಾಧ್ಯವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಪರೀಕ್ಷಾ ಸಿಬ್ಬಂದಿಗೆ ಡ್ರೆಸ್ ಕೋಡ್ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿತ್ತು ಮತ್ತು ವಿದ್ಯಾರ್ಥಿಗಳು 2 ಗಂಟೆ ಮುಂಚಿತವಾಗಿ ಬರಬೇಕೆಂದು ಸೂಚಿಸಲಾಗಿತ್ತು. ಆದರೂ ಕೆಲವು ಕಾಲೇಜುಗಳ ಸಿಬ್ಬಂದಿ ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ. ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆ ಎಂದು ಅಭಿಪ್ರಾಯಪಟ್ಟಿರುವ ಸಚಿವರು, ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ನೀಡುವ ವರದಿ ಆಧರಿಸಿ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.








