ಬೆಂಗಳೂರು : ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಆವರಣ ಗೋಡೆ ಕುಸಿದು ಏಳು ಮಂದಿ ಕಾರ್ಮಿಕರು ಮೃತಪಟ್ಟ ದುರದೃಷ್ಟಕರ ಘಟನೆಗೆ ಸಂಬಂಧಿಸಿದಂತೆ, ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳದ ಭೀಕರತೆಯನ್ನು ಕಣ್ಣಾರೆ ಕಂಡ ಅವರು, ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಕಂಪೌಂಡ್ ಕುಸಿತದ ಸ್ಥಳಕ್ಕೆ ಭೇಟಿ ನೀಡಿದ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು, ಕಾಮಗಾರಿಯ ಗುಣಮಟ್ಟ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಾಥಮಿಕ ತನಿಖೆಯ ಪ್ರಕಾರ, ಕಾಮಗಾರಿ ನಡೆಯುವ ಸಂದರ್ಭದಲ್ಲಿ ಅಗತ್ಯ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ವಹಿಸದಿರುವುದು ದುರಂತಕ್ಕೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಲೋಕಾಯುಕ್ತರು, ಬಿಬಿಎಂಪಿ ಮತ್ತು ಆಸ್ಪತ್ರೆ ಆಡಳಿತ ಮಂಡಳಿಯ ಎಂಜಿನಿಯರ್‌ಗಳ ಪಾತ್ರದ ಬಗ್ಗೆ ತನಿಖೆ ನಡೆಸಲು ಸೂಚಿಸಿದ್ದಾರೆ. “ನಿರ್ಲಕ್ಷ್ಯ ತೋರಿದ ಯಾವುದೇ ಅಧಿಕಾರಿಯನ್ನು ಬಿಡುವ ಪ್ರಶ್ನೆಯೇ ಇಲ್ಲ” ಎಂದು ಅವರು ಈ ಸಂದರ್ಭದಲ್ಲಿ ಎಚ್ಚರಿಸಿದರು.
ಈ ದುರಂತಕ್ಕೆ ಸಂಬಂಧಿಸಿದಂತೆ ಕೇವಲ ಕೆಳಹಂತದ ಸಿಬ್ಬಂದಿಯನ್ನಲ್ಲ, ಬದಲಿಗೆ ಆಡಳಿತ ಯಂತ್ರದ ಉನ್ನತ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲು ಲೋಕಾಯುಕ್ತ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಲೋಕಾಯುಕ್ತರು ಅತ್ಯಂತ ಮಹತ್ವದ ಘೋಷಣೆ ಮಾಡಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಬಿಎ ಮುಖ್ಯ ಆಯುಕ್ತ ಎಂ ಮಹೇಶ್ವರ ರಾವ್, ನಗರದ ಐದೂ ಪಾಲಿಕೆಗಳ ಆಯುಕ್ತರು, ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಜಲಮಂಡಳಿ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.
ಒಂದೇ ಮಳೆಗೆ ಇಷ್ಟೆಲ್ಲಾ ಅವಾಂತರಗಳಾಗುತ್ತಿದ್ದರೂ ಜಿಬಿಎ ಮತ್ತು ಜಲಮಂಡಳಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಮರದ ರೆಂಬೆಗಳನ್ನು ತೆರವುಗೊಳಿಸುವಂತಹ ಪ್ರಾಥಮಿಕ ಕೆಲಸಗಳು ಏಕಾಗಿಲ್ಲ? ಗೋಡೆಗಳು ಶಿಥಿಲವಾಗಿದ್ದರೂ ವ್ಯಾಪಾರಕ್ಕೆ ಅನುಮತಿ ನೀಡಿದ್ದು ಯಾಕೆ? ವಿದ್ಯುತ್ ಹೊಡೆದು ಸಾವು ಸಂಭವಿಸಿದ ಪ್ರಕರಣಗಳಲ್ಲೂ ಯಾರೂ ಜವಾಬ್ದಾರಿ ತೆಗೆದುಕೊಂಡಿಲ್ಲವೇಕೆ? ವೈದ್ಯಕೀಯ ಶಿಕ್ಷಣ ಇಲಾಖೆಯು ಈ ತಡೆಗೋಡೆಯ ಬಗ್ಗೆ ಯಾವುದೇ ಗಮನಹರಿಸಿರಲಿಲ್ಲವೇ ಎಂದು ಪ್ರಶ್ನೆ ಕೇಳಿದ್ದಾರೆ.








