ಬೆಂಗಳೂರು : ಬಿಗ್ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ಮತ್ತೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೆಟ್ರೋಲ್ ಬಾಂಬ್ ಮಾದರಿಯ ವಸ್ತು ಬ್ಲಾಸ್ಟ್ ಆಗುವ ದೃಶ್ಯ ಹೊಂದಿರುವ ರೀಲ್ಸ್ ಮಾಡಿರುವ ಬಗ್ಗೆ ರಜತ್ ವಿರುದ್ಧ ಕನಕಪುರದ ಕಗ್ಗಲೀಪುರ ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ರಜತ್, ಇತ್ತೀಚೆಗೆ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಈ ರೀಲ್ಸ್ ಅಪ್ಲೋಡ್ ಮಾಡಿದ್ದರು. ಬೈಕ್ನಲ್ಲಿ ಸ್ಟೈಲ್ ಆಗಿ ಬರುವ ರಜತ್ ಹಿಂದೆ ಪೆಟ್ರೋಲ್ ಬಾಂಬ್ ಮಾದರಿಯ ವಸ್ತು ಸ್ಫೋಟವಾಗುವ ದೃಶ್ಯ ಇದಾಗಿತ್ತು. ಆ ರೀಲ್ಸ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ತಮ್ಮ ತಪ್ಪು ಅರಿತು ರಜತ್ ಕ್ಷಮೆ ಸಹ ಕೇಳಿದ್ದರು. ಆದರೀಗ, ಬಿಗ್ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.
ಈ ಘಟನೆ ಕುರಿತು ಡಿವೈಎಸ್ಪಿ ಶ್ರೀನಿವಾಸ್ ಅವರು ಮಾಧ್ಯಮದೊಂದಿಗೆ ಮಾತನಾಡಿ, ರಜತ್ ಅವರು ಸಾರ್ವಜನಿಕ ಶಾಂತಿಗೆ ಭಂಗ, ಅನುಚಿತ ವರ್ತನೆ, ರಸ್ತೆ ನಿಯಮ ಉಲ್ಲಂಘನೆ, ಸಾರ್ವಜನಿಕ ಆಸ್ತಿಗೆ ನಷ್ಟ ಮಾಡಿದ್ದಾರೆ. ಬಿಎನ್ಎಸ್ನ ವಿವಿಧ ಕಲಂಗಳ ಅಡಿಯಲ್ಲಿ ರಜತ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಿದ್ದೇವೆ. ರಜತ್ ಅವರಿಗೆ ನೋಟಿಸ್ ನೀಡಿ, ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.








