ವಾಷಿಂಗ್ಟನ್: ಇರಾನ್ ಮೇಲೆ ಅಮೆರಿಕ ವಿಧಿಸಿರುವ ನೌಕಾಪಡೆ ದಿಗ್ಬಂಧನವು ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಇರಾನ್ ಸಂಪೂರ್ಣವಾಗಿ ಶರಣಾಗುವವರೆಗೆ (Cry Uncle) ಈ ಆರ್ಥಿಕ ದಿಗ್ಬಂಧನವನ್ನು ಹಿಂಪಡೆಯುವುದಿಲ್ಲ ಎಂದು ಗುಡುಗಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಜಾಗತಿಕ ತೈಲ ವ್ಯಾಪಾರದ ಪ್ರಮುಖ ಹಾದಿಯಾಗಿರುವ ಹಾರ್ಮುಜ್ ಜಲಸಂಧಿಯನ್ನು ‘ಟ್ರಂಪ್ ಜಲಸಂಧಿ’ (Strait of Trump) ಎಂದು ಮರುನಾಮಕರಣ ಮಾಡಿರುವ ನಕ್ಷೆಯನ್ನು ಹಂಚಿಕೊಳ್ಳುವ ಮೂಲಕ ಇರಾನ್ಗೆ ಬಹಿರಂಗ ಸವಾಲು ಹಾಕಿದ್ದಾರೆ.
ಇರಾನ್ ತನ್ನ ಪರಮಾಣು ಹಠವನ್ನು ಬಿಟ್ಟು ಅಮೆರಿಕದ ನಿಯಮಗಳಿಗೆ ಒಪ್ಪುವವರೆಗೆ ದಿಗ್ಬಂಧನ ಮುಂದುವರಿಯಲಿದೆ. “ಅವರು ನಮ್ಮ ಮುಂದೆ ಬಂದು ಸಹಾಯಕ್ಕಾಗಿ ಅಂಗಲಾಚುವವರೆಗೂ ಈ ಬಿಗಿ ಹಿಡಿತ ಸಡಿಲಿಸುವುದಿಲ್ಲ” ಎಂದು ಟ್ರಂಪ್ ಕಟುವಾಗಿ ಹೇಳಿದ್ದಾರೆ.
ಟ್ರಂಪ್ ಹಂಚಿಕೊಂಡಿರುವ ನಕ್ಷೆಯಲ್ಲಿ ಹಾರ್ಮುಜ್ ಜಲಸಂಧಿಯ ಪ್ರದೇಶವನ್ನು ಅಮೆರಿಕದ ಸಂಪೂರ್ಣ ನಿಯಂತ್ರಣದಲ್ಲಿರುವಂತೆ ತೋರಿಸಲಾಗಿದ್ದು, ಅದಕ್ಕೆ ತಮ್ಮದೇ ಹೆಸರಿಟ್ಟಿರುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಾದಕ್ಕೆ ಕಾರಣವಾಗಿದೆ.
ಈ ಹೇಳಿಕೆಯ ಬೆನ್ನಲ್ಲೇ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿಯಿಂದ ಕಚ್ಚಾ ತೈಲ ಬೆಲೆಗಳು ಮತ್ತೆ ಏರಿಕೆ ಹಾದಿ ಹಿಡಿದಿವೆ.








