ನವದೆಹಲಿ : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (EPFO) ಕೋಟ್ಯಂತರ ಚಂದಾದಾರರಿಗೆ ಕೇಂದ್ರ ಸರ್ಕಾರವು ಶೀಘ್ರದಲ್ಲೇ ದೊಡ್ಡ ಉಡುಗೊರೆಯನ್ನು ನೀಡಲು ಮುಂದಾಗಿದೆ. ಬಡ್ಡಿ ದರ ಏರಿಕೆ, ಕನಿಷ್ಠ ಪೆನ್ಷನ್ ಹೆಚ್ಚಳ ಮತ್ತು ಎಟಿಎಂ ಮೂಲಕ ಹಣ ಪಡೆಯುವ ಸೌಲಭ್ಯ ಸೇರಿದಂತೆ ಮೂರು ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ.
1. 8.25% ಬಡ್ಡಿ ಹಣ ಜಮೆ
ಕೇಂದ್ರ ಸರ್ಕಾರವು 2025-26ರ ಹಣಕಾಸು ವರ್ಷಕ್ಕೆ ಪಿಎಫ್ ಮೊತ್ತದ ಮೇಲೆ 8.25% ಬಡ್ಡಿ ದರವನ್ನು ನಿಗದಿಪಡಿಸಿದೆ. ಕಾರ್ಮಿಕ ಇಲಾಖೆಯು ಈಗಾಗಲೇ ಈ ಪ್ರಸ್ತಾವನೆಗೆ ಅಸ್ತು ಎಂದಿದ್ದು, ಹಣಕಾಸು ಸಚಿವಾಲಯದ ಅಧಿಕೃತ ಅನುಮೋದನೆಯಷ್ಟೇ ಬಾಕಿ ಇದೆ. ಅನುಮೋದನೆ ದೊರೆತ ತಕ್ಷಣ, ದೇಶಾದ್ಯಂತ ಇರುವ ಕೋಟ್ಯಂತರ ಉದ್ಯೋಗಿಗಳ ಪಿಎಫ್ ಖಾತೆಗೆ ಬಡ್ಡಿಯ ಮೊತ್ತ ಜಮೆಯಾಗಲಿದೆ.
2. ಕನಿಷ್ಠ ಪೆನ್ಷನ್ ಮಿತಿ ಹೆಚ್ಚಳ ಸಾಧ್ಯತೆ
ಪ್ರಸ್ತುತ ಇಪಿಎಸ್-95 (EPS-95) ಯೋಜನೆಯಡಿ ಸಿಗುತ್ತಿರುವ ಕನಿಷ್ಠ ಪೆನ್ಷನ್ ಮೊತ್ತ ₹1,000 ಅನ್ನು ಹೆಚ್ಚಿಸಬೇಕೆಂದು ಕಾರ್ಮಿಕ ಸಂಘಟನೆಗಳು ದೀರ್ಘಕಾಲದಿಂದ ಒತ್ತಾಯಿಸುತ್ತಿವೆ.
ಬೇಡಿಕೆ: ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಈ ಮೊತ್ತವನ್ನು ₹7,500 ಕ್ಕೆ ಏರಿಸಬೇಕೆಂದು ಆಗ್ರಹಿಸಲಾಗಿದೆ.
ಸುಪ್ರೀಂ ಕೋರ್ಟ್ ಸೂಚನೆ: ಪೆನ್ಷನ್ ಹೆಚ್ಚಳದ ಬಗ್ಗೆ ಮೂರು ತಿಂಗಳೊಳಗೆ ಸ್ಪಷ್ಟನೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಹೀಗಾಗಿ ಶೀಘ್ರದಲ್ಲೇ ನಿವೃತ್ತ ನೌಕರರ ಪೆನ್ಷನ್‌ನಲ್ಲಿ ಗಣನೀಯ ಏರಿಕೆಯಾಗುವ ನಿರೀಕ್ಷೆಯಿದೆ.
3. ಇನ್ಮುಂದೆ ಎಟಿಎಂ ಮೂಲಕವೇ ಪಿಎಫ್ ಹಣ ವಿತ್‌ಡ್ರಾ!
ಪಿಎಫ್ ಹಣವನ್ನು ಪಡೆಯಲು ಇನ್ನು ಮುಂದೆ ಕಚೇರಿಗಳಿಗೆ ಅಲೆಯುವ ಅಥವಾ ದಿನಗಟ್ಟಲೆ ಕಾಯುವ ಅಗತ್ಯವಿಲ್ಲ. ಬ್ಯಾಂಕ್ ಅಕೌಂಟ್ ಮಾದರಿಯಲ್ಲೇ ಪಿಎಫ್ ಖಾತೆಯಿಂದ ಹಣ ಪಡೆಯಲು ‘ಪಿಎಫ್ ಡೆಬಿಟ್ ಕಾರ್ಡ್’ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ.
ಹೇಗೆ ಕಾರ್ಯನಿರ್ವಹಿಸುತ್ತದೆ? ನಿಮ್ಮ ಪಿಎಫ್ ಖಾತೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾಗುತ್ತದೆ. ಪ್ರತ್ಯೇಕ ಡೆಬಿಟ್ ಕಾರ್ಡ್ ಬಳಸಿ ಯಾವುದೇ ಎಟಿಎಂ ಮೂಲಕ ತುರ್ತು ಸಂದರ್ಭಗಳಲ್ಲಿ ಹಣವನ್ನು ಹಿಂಪಡೆಯಬಹುದು.








