ಮಾಧ್ಯಮ ವರದಿಗಳ ಪ್ರಕಾರ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಈ ವರ್ಷದ ಡಿಸೆಂಬರ್ನಿಂದ ಹೊಸ ಮಾದರಿಯ ಆಧಾರ್ ಕಾರ್ಡ್ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಹೊಸ ಕಾರ್ಡ್ಗಳು ಸಂಪೂರ್ಣವಾಗಿ ಹೊಸ ವಿನ್ಯಾಸ ಮತ್ತು ಅತ್ಯಾಧುನಿಕ ಭದ್ರತಾ ಫೀಚರ್ಗಳನ್ನು ಹೊಂದಿರಲಿವೆ ಎಂದು ವರದಿಗಳು ತಿಳಿಸಿವೆ. ನಾಗರಿಕರ ಖಾಸಗಿತನ ಮತ್ತು ಭದ್ರತೆಯನ್ನು ಇನ್ನಷ್ಟು ಬಲಪಡಿಸುವುದೇ ಈ ಬದಲಾವಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ.
1. ಕಾರ್ಡ್ ಮೇಲೆ ಮಾಹಿತಿ ಇರುವುದಿಲ್ಲ:
ಹಳೆಯ ಆಧಾರ್ ಕಾರ್ಡ್ಗಳಲ್ಲಿ ವ್ಯಕ್ತಿಯ ಹೆಸರು, ಆಧಾರ್ ಸಂಖ್ಯೆ, ವಿಳಾಸ, ಜನ್ಮ ದಿನಾಂಕ ಮತ್ತು ಲಿಂಗದ ಮಾಹಿತಿ ಎಲ್ಲರಿಗೂ ಕಾಣಿಸುವಂತೆ ಮುದ್ರಿತವಾಗುತ್ತಿತ್ತು. ಆದರೆ ಹೊಸ ಆಧಾರ್ ಕಾರ್ಡ್ಗಳಲ್ಲಿ ಈ ಯಾವುದೇ ವಿವರಗಳು ನೇರವಾಗಿ ಕಾರ್ಡ್ ಮೇಲೆ ಕಾಣಿಸುವುದಿಲ್ಲ.
2. ಕೇವಲ ಫೋಟೋ ಮಾತ್ರ ಲಭ್ಯ:
ಹೊಸ ಆಧಾರ್ ಕಾರ್ಡ್ನಲ್ಲಿ ಕೇವಲ ವ್ಯಕ್ತಿಯ ಫೋಟೋ ಮಾತ್ರ ಮೇಲ್ನೋಟಕ್ಕೆ ಕಾಣಿಸುತ್ತದೆ. ಉಳಿದ ಎಲ್ಲಾ ಪ್ರಮುಖ ವಿವರಗಳನ್ನು ಅತ್ಯಾಧುನಿಕ ಕ್ಯೂಆರ್ ಕೋಡ್ (QR Code) ಒಳಗೆ ಅಡಗಿಸಿಡಲಾಗುತ್ತದೆ.
3. ಎನ್ಕ್ರಿಪ್ಟ್ ಆದ ಕ್ಯೂಆರ್ ಕೋಡ್:
ಈ ಹೊಸ ಕ್ಯೂಆರ್ ಕೋಡ್ ನಿಮ್ಮ ಹೆಸರು, ಆಧಾರ್ ಸಂಖ್ಯೆ, ವಿಳಾಸ ಮತ್ತು ಬಯೋಮೆಟ್ರಿಕ್ ವಿವರಗಳನ್ನು ‘ಎನ್ಕ್ರಿಪ್ಟ್’ (Encrypted) ರೂಪದಲ್ಲಿ ಹೊಂದಿರುತ್ತದೆ. ಅಂದರೆ, ಸಾಮಾನ್ಯ ಜನರು ಅಥವಾ ಸ್ಕ್ಯಾನರ್ಗಳು ಇದನ್ನು ಓದಲು ಸಾಧ್ಯವಿಲ್ಲ.
ಮಾಹಿತಿಯನ್ನು ಯಾರು ನೋಡಬಹುದು?
ಹೊಸ ಕಾರ್ಡ್ನಲ್ಲಿ ಮಾಹಿತಿ ಮುದ್ರಿತವಾಗದ ಕಾರಣ, ಇನ್ನು ಮುಂದೆ ಹೋಟೆಲ್ಗಳು ಅಥವಾ ಖಾಸಗಿ ಕಚೇರಿಗಳು ನಿಮ್ಮ ಆಧಾರ್ ಕಾರ್ಡ್ನ ಫೋಟೋಕಾಪಿ (ಜೆರಾಕ್ಸ್) ಬಳಸಿಕೊಂಡು ನಿಮ್ಮ ವೈಯಕ್ತಿಕ ಡೇಟಾವನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ. ಕೇವಲ ಸರ್ಕಾರದ ಅಧಿಕೃತ ಸ್ಕ್ಯಾನರ್ಗಳು, UIDAI ಅಧಿಕೃತ ಆ್ಯಪ್ಗಳು ಮತ್ತು ಸರ್ಕಾರದಿಂದ ಅನುಮತಿ ಪಡೆದ ವೆರಿಫಿಕೇಶನ್ ಸಾಧನಗಳು ಮಾತ್ರ ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವಿವರಗಳನ್ನು ಪಡೆಯಬಲ್ಲವು.
ಭಾರತದಲ್ಲಿ ಪ್ರಸ್ತುತ ಸುಮಾರು 134 ಕೋಟಿ ಆಧಾರ್ ಕಾರ್ಡ್ದಾರರಿದ್ದಾರೆ. ಆಧಾರ್ ಡೇಟಾವನ್ನು ಭಾರತದ ಒಳಗೇ ಅತ್ಯಂತ ಸುರಕ್ಷಿತವಾಗಿ ಸಂಗ್ರಹಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಫೇಸ್ ಅಥೆಂಟಿಕೇಶನ್: UIDAI ಈಗ ಕೃತಕ ಬುದ್ಧಿಮತ್ತೆ (AI) ಮತ್ತು ಮೆಷಿನ್ ಲರ್ನಿಂಗ್ ತಂತ್ರಜ್ಞಾನ ಆಧಾರಿತ ‘ಫೇಸ್ ಅಥೆಂಟಿಕೇಶನ್’ ಸೇವೆಯನ್ನು ನೀಡುತ್ತಿದೆ. ಇದರಿಂದ ಮುಖದ ಗುರುತಿನ ಮೂಲಕ ನಿಖರವಾಗಿ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗುತ್ತದೆ.
ಅಧಿಕೃತ ಸಂಸ್ಥೆಗಳಿಗೆ ಮಾತ್ರ ಅವಕಾಶ: ಆಧಾರ್ ದೃಢೀಕರಣ ಸೇವೆಯನ್ನು ಬಳಸಲು ಬಯಸುವ ಯಾವುದೇ ಸಂಸ್ಥೆಯು ಆಧಾರ್ ಕಾಯ್ದೆಯಡಿ UIDAI ನಲ್ಲಿ ಅಧಿಕೃತವಾಗಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.








