ಧಾರ್ಮಿಕ ಪಂಗಡಗಳ ಮೂಲ ಧಾರ್ಮಿಕ ಆಚರಣೆಗಳಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲದಿದ್ದರೂ, ಧಾರ್ಮಿಕ ಹಕ್ಕುಗಳ ಚಲಾವಣೆಯು ಲೌಕಿಕ (secular) ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದಾಗ ಮಧ್ಯಪ್ರವೇಶಿಸಲು ರಾಜ್ಯ ಸರ್ಕಾರಕ್ಕೆ ಪೂರ್ಣ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಒಂಬತ್ತು ನ್ಯಾಯಾಧೀಶರ ಪೀಠವು ಸಂವಿಧಾನದ 25 ಮತ್ತು 26 ನೇ ವಿಧಿಗಳ ನಡುವಿನ ಸಂಬಂಧದ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿತು. ಕೇರಳದ ಶಬರಿಮಲೆ ದೇಗುಲಕ್ಕೆ ಋತುಸ್ರಾವದ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ವಿವಾದದಿಂದ ಉದ್ಭವಿಸಿರುವ ದೊಡ್ಡ ಸಾಂವಿಧಾನಿಕ ಪ್ರಶ್ನೆಗಳನ್ನು ಪೀಠವು ಪರಿಶೀಲಿಸುತ್ತಿದೆ. ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ, ಎಂ.ಎಂ. ಸುಂದ್ರೇಶ್, ಅಹ್ಸಾನುದ್ದೀನ್ ಅಮಾನುಲ್ಲಾ, ಅರವಿಂದ್ ಕುಮಾರ್, ಆಗಸ್ಟೀನ್ ಜಾರ್ಜ್ ಮಸಿಹ್, ಆರ್. ಮಹದೇವನ್, ಪ್ರಸನ್ನ ಬಿ. ವರಾಳೆ ಮತ್ತು ಜಾಯ್ಮಲ್ಯ ಬಾಗ್ಚಿ ಅವರು ಇದ್ದಾರೆ.
ಆರಾಧನಾ ವಿಧಾನಗಳು ಮತ್ತು ಮೂಲ ಧಾರ್ಮಿಕ ಆಚರಣೆಗಳ ವಿಷಯದಲ್ಲಿ ಇರುವ ಸ್ವಾಯತ್ತತೆಯು ನ್ಯಾಯಾಂಗದ ಪರಿಶೀಲನೆಯಿಂದ ದೂರವಿರುತ್ತದೆ ಎಂದು ಪೀಠವು ಒತ್ತಿಹೇಳಿದೆ. ಆದರೆ, ಧಾರ್ಮಿಕ ಆಚರಣೆಯು ಸಾರ್ವಜನಿಕ ಜೀವನದ ಮೇಲೆ ಪರಿಣಾಮ ಬೀರಿದಾಗ ಈ ರಕ್ಷಣೆ ಸಂಪೂರ್ಣವಾಗಿರುವುದಿಲ್ಲ ಎಂದು ನ್ಯಾಯಮೂರ್ತಿ ನಾಗರತ್ನ ತಿಳಿಸಿದರು.
ಈ ಅಂಶವನ್ನು ವಿವರಿಸಿದ ನ್ಯಾಯಮೂರ್ತಿಗಳು, “ದೇಗುಲವೊಂದು ತನ್ನ ಧಾರ್ಮಿಕ ವಿಧಿವಿಧಾನಗಳನ್ನು ಮುಕ್ತವಾಗಿ ನಡೆಸಬಹುದು. ಆದರೆ ಧರ್ಮದ ಹೆಸರಿನಲ್ಲಿ ನಾಗರಿಕ ಸುವ್ಯವಸ್ಥೆಗೆ ಭಂಗ ತರುವಂತಿಲ್ಲ. ನಿಮ್ಮ ಧಾರ್ಮಿಕ ಚಟುವಟಿಕೆಗಳನ್ನು ಮಾಡಿ, ಆದರೆ ರಸ್ತೆಗಳನ್ನು ನಿರ್ಬಂಧಿಸಿ ಅಲ್ಲ… ಅಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಯಾವಾಗಲೂ ಮಧ್ಯಪ್ರವೇಶಿಸಬಹುದು,” ಎಂದು ಮಾರ್ಮಿಕವಾಗಿ ನುಡಿದರು.
ವಿಚಾರಣೆಯ ಸಂದರ್ಭದಲ್ಲಿ ಧರ್ಮಗಳ ನಡುವೆ ಹೋಲಿಕೆ ಮಾಡಲು ಪ್ರಯತ್ನಿಸಿದ ವಕೀಲ ಅಶ್ವಿನಿ ಉಪಾಧ್ಯಾಯ ಅವರಿಗೆ ನ್ಯಾಯಾಲಯ ಎಚ್ಚರಿಕೆ ನೀಡಿತು. ಯಾವುದೇ ಒಂದು ಧರ್ಮ ಅಥವಾ ಭಾಷೆ ಇತರರಿಗಿಂತ ಶ್ರೇಷ್ಠ ಎಂದು ಬಿಂಬಿಸದಂತೆ ಮತ್ತು ನ್ಯಾಯಾಲಯದಲ್ಲಿ ಸಾಂವಿಧಾನಿಕ ತಟಸ್ಥತೆಯನ್ನು ಕಾಪಾಡಿಕೊಳ್ಳುವಂತೆ ಸೂಚಿಸಿತು. “ಎಲ್ಲರೂ ಸಮಾನರು” ಎಂದು ನ್ಯಾಯಮೂರ್ತಿ ನಾಗರತ್ನ ಈ ಸಂದರ್ಭದಲ್ಲಿ ನೆನಪಿಸಿದರು.








