ಹಾಸನ: ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಉಂಟಾದ ಅನಾಹುತಕ್ಕೆ ಸಂಬಂಧಿಸಿದಂತೆ, ಸಂತ್ರಸ್ತ ಗ್ರಾಹಕನಿಗೆ 27 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮಂಗಳೂರಿನ ಎಲ್‌ಪಿಜಿ ಕಂಪನಿಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ಆದೇಶ ನೀಡಿದೆ.
ಘಟನೆಯ ಹಿನ್ನೆಲೆ:
2023ರ ಅಕ್ಟೋಬರ್ 10ರಂದು ಅರಸೀಕೆರೆ ನಗರದ ನಿವಾಸಿ ಚನ್ನಬಸಪ್ಪ ಎಂಬುವವರ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಅರಸೀಕೆರೆಯ ಕುಸುಮ ಗ್ಯಾಸ್ ಏಜೆನ್ಸಿಯಿಂದ ಸಿಲಿಂಡರ್ ಪಡೆದಿದ್ದ ಚನ್ನಬಸಪ್ಪ ಅವರ ಮನೆಯಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತ್ತು.
ಈ ಅನಾಹುತದಲ್ಲಿ ಚನ್ನಬಸಪ್ಪ ಅವರ ಪತ್ನಿ ಬೆಂಕಿಯಿಂದ ತೀವ್ರವಾಗಿ ಗಾಯಗೊಂಡಿದ್ದರು. ಮನೆಯಲ್ಲಿದ್ದ 15 ಸಾವಿರ ತೆಂಗಿನಕಾಯಿ, ಟಿವಿ, ಫ್ರಿಜ್, ಪೀಠೋಪಕರಣಗಳು ಬೆಂಕಿಗಾಹುತಿಯಾಗಿದ್ದವು. ಸುಮಾರು 105 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳಿ ಮತ್ತು 1 ಲಕ್ಷ ರೂ. ನಗದು ಸುಟ್ಟು ಕರಕಲಾಗಿತ್ತು. ಬೆಂಕಿಯ ಕೆನ್ನಾಲಿಗೆಗೆ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದವು.
ಕಂಪನಿಯ ವಾದವೇನಿತ್ತು?
ಅನಾಹುತಕ್ಕೆ ಕಳಪೆ ಸಿಲಿಂಡರ್, ರೆಗ್ಯುಲೇಟರ್ ಮತ್ತು ಟ್ಯೂಬ್ ಕಾರಣ ಎಂದು ಚನ್ನಬಸಪ್ಪ ದೂರು ನೀಡಿದ್ದರು. ಆದರೆ, ಎಲ್‌ಪಿಜಿ ಕಂಪನಿ ಮತ್ತು ವಿಮಾ ಕಂಪನಿಯು (ಎಸ್‌ಬಿಐ ಜನರಲ್ ಇನ್ಶೂರೆನ್ಸ್) ಈ ಆರೋಪವನ್ನು ತಳ್ಳಿಹಾಕಿದ್ದವು. “ಬೆಂಕಿ ಮೊದಲು ತೆಂಗಿನಕಾಯಿ ರಾಶಿಯಿಂದ ಹೊತ್ತಿಕೊಂಡಿದೆ ಹಾಗೂ ಗ್ರಾಹಕರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ” ಎಂದು ವಾದಿಸಿ ಪರಿಹಾರ ನೀಡಲು ನಿರಾಕರಿಸಿದ್ದವು.
ಆಯೋಗದ ತೀರ್ಪು:
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಸಿ.ಎಂ. ಚಂಚಲ ಹಾಗೂ ಸದಸ್ಯರಾದ ಆರ್. ಅನುಪಮಾ ಅವರ ಪೀಠವು ಒಟ್ಟು 27 ಲಕ್ಷ ರೂ. ಗಳನ್ನು ಕಂಪನಿಯು ಪಾವತಿಸಬೇಕು. ಸೇವಾ ನ್ಯೂನತೆಗಾಗಿ 5 ಸಾವಿರ ರೂ. ದಂಡ. ಸಂತ್ರಸ್ತರಿಗೆ ಉಂಟಾದ ಮಾನಸಿಕ ತೊಂದರೆಗೆ 5 ಸಾವಿರ ರೂ. ದೂರುದಾರರ ಖರ್ಚಿಗೆ 5 ಸಾವಿರ ರೂ. ಈ ಎಲ್ಲಾ ಮೊತ್ತವನ್ನು ಮುಂದಿನ 6 ವಾರಗಳ ಒಳಗಾಗಿ ಪಾವತಿಸಬೇಕೆಂದು ಆಯೋಗವು ಸ್ಪಷ್ಟಪಡಿಸಿದೆ.








