ಗ್ಯಾಂಗ್ಟಕ್: ಸಿಕ್ಕಿಂ ರಾಜ್ಯದ 50ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಗ್ಯಾಂಗ್ಟಕ್‌ನಲ್ಲಿ ಕ್ರೀಡಾ ಸ್ಫೂರ್ತಿ ಮೆರೆದರು. ಅಲ್ಲಿನ ಸ್ಥಳೀಯ ಮಕ್ಕಳೊಂದಿಗೆ ಫುಟ್‌ಬಾಲ್ ಆಡುವ ಮೂಲಕ ಎಲ್ಲರ ಗಮನ ಸೆಳೆದರು.
ಮಂಗಳವಾರ ಬೆಳಿಗ್ಗೆ ಗ್ಯಾಂಗ್ಟಕ್‌ನ ಫುಟ್‌ಬಾಲ್ ಮೈದಾನಕ್ಕೆ ಭೇಟಿ ನೀಡಿದ ಪ್ರಧಾನಿ, ಮಕ್ಕಳೊಂದಿಗೆ ಅತ್ಯಂತ ಉತ್ಸಾಹದಿಂದ ಚೆಂಡನ್ನು ಒದ್ದರು. ನೀಲಿ ಬಣ್ಣದ ಟ್ರ್ಯಾಕ್ ಸೂಟ್ ಧರಿಸಿದ್ದ ಅವರು ಮಕ್ಕಳೊಂದಿಗೆ ಬೆರೆತು ಗೋಲ್ ಹೊಡೆದು ಸಂಭ್ರಮಿಸಿದರು.
ಆಟದ ನಂತರ ಮಕ್ಕಳೊಂದಿಗೆ ಮಾತನಾಡಿದ ಅವರು, “ಆಟದಲ್ಲಿ ಕೇವಲ ಅಭ್ಯಾಸವಷ್ಟೇ ಸಾಲದು, ಪಂದ್ಯಗಳನ್ನಾಡಿದಾಗ ಮಾತ್ರ ನಿಜವಾದ ಕ್ರೀಡಾ ಉತ್ಸಾಹ ಮೂಡುತ್ತದೆ” ಎಂದು ಕಿವಿಮಾತು ಹೇಳಿದರು. ಭಾರತವು ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿದೆ, ನೀವು ದೇಶದ ಭವಿಷ್ಯದ ಆಟಗಾರರಾಗಬೇಕು ಎಂದು ಹುರಿದುಂಬಿಸಿದರು.
ಸಾಮಾಜಿಕ ಜಾಲತಾಣದಲ್ಲಿ ವೈರಲ್: ಈ ವಿಡಿಯೋವನ್ನು ಎಕ್ಸ್ (X) ನಲ್ಲಿ ಹಂಚಿಕೊಂಡಿರುವ ಪ್ರಧಾನಿ, “ಸಿಕ್ಕಿಂನ ಸುಂದರ ಬೆಳಿಗ್ಗೆಯಲ್ಲಿ ನನ್ನ ಪುಟ್ಟ ಗೆಳೆಯರೊಂದಿಗೆ ಫುಟ್‌ಬಾಲ್ ಆಡುವುದಕ್ಕಿಂತ ಸಂತೋಷ ಮತ್ತೊಂದಿಲ್ಲ” ಎಂದು ಬರೆದುಕೊಂಡಿದ್ದಾರೆ.








