ನಾಸಿಕ್: ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕಚೇರಿಯಲ್ಲಿ ನಡೆದಿದೆಯೆನ್ನಲಾದ ಬಲವಂತದ ಮತಾಂತರ ಯತ್ನ ಪ್ರಕರಣವು ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬಳಾದ ನಿದಾ ಖಾನ್, ಸಂತ್ರಸ್ತ ಯುವತಿಗೆ ಬುರ್ಖಾ ಮತ್ತು ಧರ್ಮಗ್ರಂಥಗಳನ್ನು ನೀಡಿ ಮತಾಂತರಕ್ಕೆ ಪ್ರಚೋದಿಸಿದ್ದಲ್ಲದೆ, ಆಕೆಯನ್ನು ಕೆಲಸದ ನೆಪದಲ್ಲಿ ಮಲೇಷ್ಯಾಕ್ಕೆ ಕಳುಹಿಸಲು ಸಂಚು ರೂಪಿಸಿದ್ದಳು ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ನಿದಾ ಖಾನ್ ಸಂತ್ರಸ್ತ ಯುವತಿಯನ್ನು ತನ್ನ ಮನೆಗೆ ಕರೆದೊಯ್ದು ಹಿಜಾಬ್ ಮತ್ತು ಬುರ್ಖಾ ಧರಿಸುವುದು ಹೇಗೆಂದು ಕಲಿಸುತ್ತಿದ್ದಳು. ಅಲ್ಲದೆ, ಯುವತಿಯ ಮೊಬೈಲ್ನಲ್ಲಿ ಧಾರ್ಮಿಕ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಿ, ಇಸ್ಲಾಂ ಧರ್ಮದ ಬಗ್ಗೆ ಬೋಧನೆ ಮಾಡುತ್ತಿದ್ದಳು ಎಂದು ವಿಶೇಷ ಸರ್ಕಾರಿ ಅಭಿಯೋಜಕ ಅಜಯ್ ಮಿಸಾರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಸಂತ್ರಸ್ತೆಯನ್ನು ‘ಹಾನಿಯಾ’ ಎಂದು ಮರುನಾಮಕರಣ ಮಾಡಲು ಸಂಚು ರೂಪಿಸಲಾಗಿತ್ತು. ನಂತರ ಇಮ್ರಾನ್ ಎಂಬ ವ್ಯಕ್ತಿಯ ಮೂಲಕ ಆಕೆಗೆ ಮಲೇಷ್ಯಾದಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ವಿದೇಶಕ್ಕೆ ಕಳುಹಿಸಲು ಸಿದ್ಧತೆ ನಡೆಸಲಾಗಿತ್ತು ಎಂಬ ಅಂಶ ತನಿಖೆಯಲ್ಲಿ ಬಯಲಾಗಿದೆ.
ಹಿಂದೂ ಧರ್ಮದ ಆಚರಣೆಗಳ ಬಗ್ಗೆ ಕೆಟ್ಟದಾಗಿ ಮಾತನಾಡಿ, ಸಂತ್ರಸ್ತೆಯ ಮನಪರಿವರ್ತನೆ ಮಾಡಲು ನಿದಾ ಖಾನ್ ಮತ್ತು ತಂಡ ಪ್ರಯತ್ನಿಸುತ್ತಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.
ನಿದಾ ಖಾನ್ ಸದ್ಯ ತಲೆಮರೆಸಿಕೊಂಡಿದ್ದು, ಆಕೆಯ ಮುಂಗಡ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು ಯಾವುದೇ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದೆ. ಆಕೆಯ ಅಂತರಾಷ್ಟ್ರೀಯ ಸಂಪರ್ಕಗಳ ಬಗ್ಗೆ ತನಿಖೆ ನಡೆಸಲು ಕಸ್ಟಡಿ ಅಗತ್ಯವಿದೆ ಎಂದು ಪೊಲೀಸರು ವಾದಿಸಿದ್ದಾರೆ.








