ಜುಬಾ: ಆಫ್ರಿಕಾ ರಾಷ್ಟ್ರವಾದ ದಕ್ಷಿಣ ಸುಡಾನ್ನ ರಾಜಧಾನಿ ಜುಬಾ (Juba) ಹೊರವಲಯದಲ್ಲಿ ಸೋಮವಾರ (ಏಪ್ರಿಲ್ 27, 2026) ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ. ವಿಮಾನದಲ್ಲಿದ್ದ ಎಲ್ಲಾ 13 ಪ್ರಯಾಣಿಕರು ಹಾಗೂ ಪೈಲಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಲ್ಲಿನ ನಾಗರಿಕ ವಿಮಾನಯಾನ ಸಂಸ್ಥೆ ದೃಢಪಡಿಸಿದೆ.
’ಸಿಟಿ ಲಿಂಕ್’ (CityLink) ಸಂಸ್ಥೆಗೆ ಸೇರಿದ ಸೆಸ್ನಾ 208 ಕ್ಯಾರವಾನ್ (Cessna 208 Caravan) ವಿಮಾನವು ಯೀ (Yei) ಪಟ್ಟಣದಿಂದ ಜುಬಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿತ್ತು. ವಿಮಾನವು ರಾಜಧಾನಿಯಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿದ್ದಾಗ ನಿಯಂತ್ರಣ ಕಳೆದುಕೊಂಡು ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿದೆ.
ಮೃತಪಟ್ಟವರಲ್ಲಿ ಇಬ್ಬರು ಕೀನ್ಯಾ ಮೂಲದವರಾಗಿದ್ದು, ಉಳಿದ 12 ಮಂದಿ ದಕ್ಷಿಣ ಸುಡಾನ್ ಪ್ರಜೆಗಳಾಗಿದ್ದಾರೆ.ಅಪಘಾತದ ತೀವ್ರತೆಗೆ ವಿಮಾನವು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳಲ್ಲಿ ಗುಡ್ಡದ ಇಳಿಜಾರಿನಲ್ಲಿ ವಿಮಾನದ ಅವಶೇಷಗಳು ಉರಿಯುತ್ತಿರುವುದು ಕಂಡುಬಂದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಹವಾಮಾನ ವೈಪರೀತ್ಯವೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.ಅಪಘಾತ ನಡೆದ ಸಮಯದಲ್ಲಿ ಈ ಭಾಗದಲ್ಲಿ ಭಾರಿ ಮಂಜು ಮತ್ತು ಮಳೆ ಇತ್ತು. ಇದರಿಂದಾಗಿ ದೃಶ್ಯ ಗೋಚರತೆ (Visibility) ತೀರಾ ಕಡಿಮೆಯಾಗಿದ್ದರಿಂದ ಪೈಲಟ್ ನಿಯಂತ್ರಣ ಕಳೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ.








