ದಕ್ಷಿಣಕನ್ನಡ : ಕಾರವಾರ ಯಶವಂತಪುರ ಎಕ್ಸ್ಪ್ರೆಸ್ ರೈಲಿನಲ್ಲಿ ಹೆರಿಗೆ ಆಗಿದ್ದು ಮೈಸೂರಿನ ಪೊನ್ನಮ್ಮ ಎನ್ನುವ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬಂಟ್ವಾಳ ನಿಲ್ದಾಣದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ರೈಲು ಬಿಸಿ ರೋಡ್ ತಲುಪಿದಾಗ ಗರ್ಭಿಣಿಗೆ ರಕ್ತಸ್ರಾವ ಶುರುವಾಗಿದೆ. ತಕ್ಷಣವೇ ಸಿಬ್ಬಂದಿಗಳು ಬಿಸಿ ರೋಡ್ ನಲ್ಲಿ ರೈಲು ನಿಲ್ಲಿಸಿದ್ದಾರೆ.
ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಬಿಸಿ ರೋಡ್ ನಲ್ಲಿ ರೈಲು ನಿಲ್ಲಿಸಿದ್ದಾರೆ. ಅರ್ಧ ಗಂಟೆಗಳ ಕಾಲ ವೈದ್ಯರು ಸ್ಥಳಕ್ಕೆ ಬರಲಿಲ್ಲ. ಈ ವೇಳೆ ರೈಲಿನಲ್ಲಿಯೇ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ವರದಿಯಾಗಿದೆ. ರೈಲು (ಸಂಖ್ಯೆ 16586, ಮುರ್ಡೇಶ್ವರ – ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್)ನಲ್ಲಿ ಸಾಮಾನ್ಯ ಬೋಗಿಯಲ್ಲಿ ಗರ್ಭಿಣಿ ಪೊನ್ನಮ್ಮ ಪ್ರಯಾಣಿಸುತ್ತಿದ್ದರು. ಬಂಟ್ವಾಳ ರೈಲು ನಿಲ್ದಾಣಕ್ಕೆ ಸಂಜೆ 07:22 ಗಂಟೆಗೆ ರೈಲು ಆಗಮಿಸಿದಾಗ ಪೊನ್ನಮ್ಮ ಅವರು ಗಂಭೀರ ಸ್ಥಿತಿಯಲ್ಲಿ ರಕ್ತಸ್ರಾವದಿಂದ ಬಳಲುತ್ತಿದ್ದರು. ಈ ವೇಳೆ ತಕ್ಷಣವೇ ರೈಲ್ವೆ ಸಿಬ್ಬಂದಿ ತುರ್ತು ವೈದ್ಯಕೀಯ ಸೇವೆಗಳಿಗೆ ಮಾಹಿತಿ ನೀಡಿ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದರು.
ಆದರೆ ಆಂಬುಲೆನ್ಸ್ ಬರುವುದಕ್ಕೂ ಮುನ್ನವೇ ಮಹಿಳೆಗೆ ಹೆರಿಗೆ ಆಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂದರ್ಭದಲ್ಲಿ ಅತ್ಯಂತ ಜಾಗ್ರತೆ ಮತ್ತು ತುರ್ತು ಸ್ಪಂದನೆಯೊಂದಿಗೆ ರೈಲು ಸಂಖ್ಯೆ 16512ರ ಎಸ್ಕಾರ್ಟಿಂಗ್ ಸಿಬ್ಬಂದಿ ಅರುಣ ಎಸ್. ಎಸ್, ಹೆಡ್ ಕಾನ್ಸ್ಟೇಬಲ್ ಶಂಕರಮೂರ್ತಿ ಇವರಿಬ್ಬರೂ ತುರ್ತು ಪರಿಸ್ಥಿತಿಯಲ್ಲಿ ಸಮಯೋಚಿತ ನೆರವು ನೀಡಿದ್ದಾರೆ.
ಈ ಕುರಿತು ವಿಭಾಗೀಯ ಹಣಕಾಸು ವ್ಯವಸ್ಥಾಪಕರಾದ ಪೃಥ್ವಿ ಎಸ್. ಹುಲ್ಲತ್ತಿ ಅವರು ಮಾತನಾಡಿ, ‘ಹೆರಿಗೆಯ ನಂತರ ತಾಯಿ ಮತ್ತು ನವಜಾತ ಶಿಶುವನ್ನು ಆಂಬ್ಯುಲೆನ್ಸ್ ಮೂಲಕ ಬಂಟ್ವಾಳದ ಸೋಮಯಾಜಿ ಖಾಸಗಿ ಆಸ್ಪತ್ರೆಗೆ ಸುರಕ್ಷಿತವಾಗಿ ಸಾಗಿಸಲಾಯಿತು. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದು, ಮಗು ಅವಧಿಗೂ ಮುಂಚೆ ಜನಿಸಿದ ಕಾರಣ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದೆ’ ಎಂದಿದ್ದಾರೆ.








