ಜಾಗತಿಕ ತಾಪಮಾನ ಏರಿಕೆಯು ಕೇವಲ ಪರಿಸರದ ಮೇಲಷ್ಟೇ ಅಲ್ಲ, ಮಾನವನ ಬದುಕಿನ ಮೇಲೆ ಭೀಕರ ಪರಿಣಾಮ ಬೀರಲಿದೆ. ಅದರಲ್ಲೂ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ವಾಸಿಸುವ ಬಡವರ ಸ್ಥಿತಿ 2050ರ ವೇಳೆಗೆ ಈಗಿಗಿಂತ ಏಳು ಪಟ್ಟು (ಶೇ. 700) ಹದಗೆಡಲಿದೆ ಎಂದು ವಿಶ್ವ ಬ್ಯಾಂಕ್ ತನ್ನ ಇತ್ತೀಚಿನ ವರದಿಯಲ್ಲಿ ಎಚ್ಚರಿಸಿದೆ. ತೀವ್ರತರವಾದ ಶಾಖವನ್ನು “ಮೌನ ಕೊಲೆಗಾರ” (Silent Killer) ಎಂದು ವರದಿಯಲ್ಲಿ ಬಣ್ಣಿಸಲಾಗಿದೆ.
ನಗರಗಳಲ್ಲಿ ಗಿಡಮರಗಳ ಕೊರತೆ ಮತ್ತು ಕಾಂಕ್ರೀಟ್ ಕಟ್ಟಡಗಳ ಅತಿಯಾದ ಬಳಕೆಯಿಂದಾಗಿ ‘ಅರ್ಬನ್ ಹೀಟ್ ಐಲೆಂಡ್’ (Urban Heat Island) ಪರಿಣಾಮ ಉಂಟಾಗುತ್ತದೆ. ಇದು ಬಡವರು ವಾಸಿಸುವ ಕೊಳೆಗೇರಿ ಮತ್ತು ಸಣ್ಣ ಮನೆಗಳಲ್ಲಿ ತಾಪಮಾನವನ್ನು ಮತ್ತಷ್ಟು ಹೆಚ್ಚಿಸಲಿದೆ.
ಪ್ರಸ್ತುತ ಬಿಸಿಗಾಳಿಗೆ ತುತ್ತಾಗುತ್ತಿರುವ ನಗರವಾಸಿಗಳ ಸಂಖ್ಯೆಗೆ ಹೋಲಿಸಿದರೆ, 2050ರ ವೇಳೆಗೆ ಈ ಪ್ರಮಾಣವು ಶೇ. 700ರಷ್ಟು ಹೆಚ್ಚಾಗಲಿದೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುವ ಭೀತಿ ಇದೆ.
ತೀವ್ರ ಶಾಖದಿಂದಾಗಿ ಕಾರ್ಮಿಕರ ಕೆಲಸದ ಸಾಮರ್ಥ್ಯ ಕುಂಠಿತಗೊಳ್ಳಲಿದ್ದು, ಇದು ಜಾಗತಿಕ ಆರ್ಥಿಕತೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ವರದಿ ಹೇಳಿದೆ.
ವಿಶ್ವ ಬ್ಯಾಂಕ್ ಪ್ರಕಾರ, ಪ್ರವಾಹ ಅಥವಾ ಚಂಡಮಾರುತದಂತೆ ಬಿಸಿಗಾಳಿ ಕಣ್ಣಿಗೆ ನೇರವಾಗಿ ಕಾಣಿಸುವುದಿಲ್ಲ. ಆದರೆ ಇದು ಗುಪ್ತವಾಗಿ ಮಾನವನ ಹೃದಯ ಮತ್ತು ಉಸಿರಾಟದ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತದೆ. ಸೂಕ್ತ ಗಾಳಿ ಮತ್ತು ತಂಪು ವ್ಯವಸ್ಥೆ ಇಲ್ಲದ ಸಣ್ಣ ಮನೆಗಳಲ್ಲಿ ವಾಸಿಸುವ ಜನರಿಗೆ ಇದು ಮಾರಕವಾಗಲಿದೆ.








