ಢಾಕಾ: ಬಾಂಗ್ಲಾದೇಶದ ಆಗ್ನೇಯ ಭಾಗದ ಕಾಕ್ಸ್ ಬಜಾರ್ ಜಿಲ್ಲೆಯಲ್ಲಿ ಹಿಂದೂ ದೇವಾಲಯವೊಂದರ ಪಾಲಕ ಹಾಗೂ ಪೂಜಾರಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ನಾಪತ್ತೆಯಾಗಿದ್ದ 40 ವರ್ಷದ ನಯನ್ ಸಾಧು (ನಯನ್ ದಾಸ್) ಅವರ ಮೃತದೇಹವು ಮೂರು ದಿನಗಳ ನಂತರ ಬೆಟ್ಟದ ಪ್ರದೇಶವೊಂದರಲ್ಲಿ ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನಯನ್ ಸಾಧು ಅವರು ಕಾಕ್ಸ್ ಬಜಾರ್ ಜಿಲ್ಲೆಯ ಖುರುಶ್ಕುಲ್ ಯೂನಿಯನ್ನಲ್ಲಿರುವ ಶಿವಕಾಳಿ ದೇವಾಲಯದಲ್ಲಿ ಪೂಜಾರಿ ಮತ್ತು ಪಾಲಕರಾಗಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 19 ರಂದು ಇಬ್ಬರು ಅಪರಿಚಿತ ವ್ಯಕ್ತಿಗಳು ಅವರನ್ನು ಕರೆದುಕೊಂಡು ಹೋಗಿದ್ದರು. ಅಂದಿನಿಂದ ಅವರು ನಾಪತ್ತೆಯಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ನಾಪತ್ತೆಯಾದ ಮೂರು ದಿನಗಳ ನಂತರ, ಗ್ರಾಮದ ಹೊರವಲಯದ ಗುಡ್ಡಗಾಡು ಪ್ರದೇಶದಲ್ಲಿ ಅವರ ದೇಹ ಪತ್ತೆಯಾಗಿದೆ. ಮೃತದೇಹವು ಕೊಳೆತ ಸ್ಥಿತಿಯಲ್ಲಿದ್ದು, ಇದು ಕೊಲೆ ಎಂದು ಸ್ಥಳೀಯ ಹಿಂದೂ ಸಮುದಾಯದ ಮುಖಂಡರು ಶಂಕಿಸಿದ್ದಾರೆ.
ಈ ಘಟನೆಯನ್ನು ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಐಕ್ಯತಾ ಪರಿಷತ್ತು (BHBCUC) ತೀವ್ರವಾಗಿ ಖಂಡಿಸಿದೆ. ಇದೊಂದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿರುವ ಸಂಘಟನೆಯು, ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ.
ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. “ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಮರಣೋತ್ತರ ಪರೀಕ್ಷೆಯ ವರದಿಯ ನಂತರವಷ್ಟೇ ತಿಳಿದುಬರಲಿದೆ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.








