ಪೇಶಾವರ: ಭಾರತದ ಪಾಲಿಗೆ ಮೋಸ್ಟ್ ವಾಂಟೆಡ್ ಉಗ್ರನಾಗಿರುವ ಹಫೀಜ್ ಸಯೀದ್‌ನ ಆಪ್ತ ಸಹಚರ ಹಾಗೂ ಲಷ್ಕರ್-ಎ-ತೈಬಾ (LeT) ಸಂಘಟನೆಯ ಹಿರಿಯ ಕಮಾಂಡರ್ ಶೇಖ್ ಯೂಸುಫ್ ಅಫ್ರಿದಿಯನ್ನು ಅಪರಿಚಿತ ಬಂದೂಕುಧಾರಿಗಳು ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಗುಂಡಿಕ್ಕಿ ಕೊಂದಿದ್ದಾರೆ.
ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಗಡಿ ಪ್ರದೇಶದಲ್ಲಿ ಶೇಖ್ ಯೂಸುಫ್ ಅಫ್ರಿದಿಯನ್ನು ಗುರಿಯಾಗಿಸಿಕೊಂಡು ಅಪರಿಚಿತರು ದಾಳಿ ನಡೆಸಿದ್ದಾರೆ. ದಾಳಿಕೋರರು ಹೊಂಚು ಹಾಕಿ ಸತತವಾಗಿ ಗುಂಡಿನ ಮಳೆಗರೆದಿದ್ದು, ಅಫ್ರಿದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ಹತ್ಯೆಗೀಡಾದ ಅಫ್ರಿದಿ, ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ಗೆ ಅತ್ಯಂತ ನಿಕಟವರ್ತಿಯಾಗಿದ್ದ. ಲಷ್ಕರ್ ಸಂಘಟನೆಯ ಹಣಕಾಸು ವ್ಯವಹಾರ ಮತ್ತು ಉಗ್ರರ ನೇಮಕಾತಿಯಲ್ಲಿ ಈತ ಪ್ರಮುಖ ಪಾತ್ರ ವಹಿಸುತ್ತಿದ್ದ ಎನ್ನಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಲು ಈತ ಸಂಚು ರೂಪಿಸುತ್ತಿದ್ದ ಎಂದು ಗುಪ್ತಚರ ಮೂಲಗಳು ತಿಳಿಸಿವೆ.








