ನವದೆಹಲಿ: ಐಪಿಎಲ್ 2026ರ ಶನಿವಾರದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಲುಂಗಿ ಎನ್ಗಿಡಿ ಅವರು ಕ್ಯಾಚ್ ಹಿಡಿಯಲು ಹೋಗಿ ತಲೆಗೆ ಗಂಭೀರವಾಗಿ ಪೆಟ್ಟು ಮಾಡಿಕೊಂಡ ಘಟನೆ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದೆ.
ಪಂಜಾಬ್ ಕಿಂಗ್ಸ್ ಇನಿಂಗ್ಸ್ನ ಮೂರನೇ ಓವರ್ನಲ್ಲಿ ಈ ದುರಂತ ಸಂಭವಿಸಿತು. ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ಬ್ಯಾಟರ್ ಪ್ರಿಯಾಂಶ್ ಆರ್ಯ ಬಾರಿಸಿದ ಚೆಂಡನ್ನು ಹಿಡಿಯಲು ಎನ್ಗಿಡಿ ಹಿಂದಕ್ಕೆ ಓಡಿದರು. ಆದರೆ ಕ್ಯಾಚ್ ಮಿಸ್ ಮಾಡಿದ ಅವರು ನಿಯಂತ್ರಣ ತಪ್ಪಿ ಮೈದಾನದ ಗಟ್ಟಿ ಮೇಲ್ಮೈಗೆ ತಲೆ ಬಡಿಸಿಕೊಂಡರು. ತಲೆ ನೆಲಕ್ಕೆ ಬಡಿದ ರಭಸಕ್ಕೆ ಅವರು ತಕ್ಷಣವೇ ಮೈದಾನದಲ್ಲಿ ಕುಸಿದುಬಿದ್ದರು.
ಸುಮಾರು 15 ನಿಮಿಷಗಳ ಕಾಲ ಆಟ ಸ್ಥಗಿತಗೊಂಡಿತು. ಎನ್ಗಿಡಿ ಅವರ ಪರಿಸ್ಥಿತಿ ಗಂಭೀರವಾಗಿ ಕಂಡುಬಂದಿದ್ದರಿಂದ ತಕ್ಷಣವೇ ಮೈದಾನಕ್ಕೆ ಆಂಬ್ಯುಲೆನ್ಸ್ ತರಲಾಯಿತು. ಫಿಸಿಯೋಗಳು ಅವರ ಕುತ್ತಿಗೆಗೆ ಬೆಂಬಲ ನೀಡಿ, ಎಚ್ಚರಿಕೆಯಿಂದ ಆಂಬ್ಯುಲೆನ್ಸ್ ಮೂಲಕ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.








