ದಾವಣಗೆರೆ : ದಾವಣಗೆರೆಯ ಚಾಮರಾಜಪೇಟೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಗುರುವಾರ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದರು.
ಪರಿಶೀಲನೆಯ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉತ್ತಮ ಆರೋಗ್ಯ ಸೇವೆಗಳನ್ನು ನೀಡುವ ದಿಕ್ಕಿನಲ್ಲಿ ಕ್ರಮ ಕೈಗೊಳ್ಳುವುದು ಅತ್ಯಂತ ಮುಖ್ಯ ಎಂದು ಹೇಳಿದರು.
ವೈದ್ಯರು ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಬಾರದು ಎಂದು ಎಚ್ಚರಿಕೆ ನೀಡಿದ ಅವರು, ಆಸ್ಪತ್ರೆಯ ಸೇವೆಯನ್ನು ಕಡೆಗಣಿಸಿ ಖಾಸಗಿ ಕ್ಲಿನಿಕ್ಗಳಿಗೆ ಆದ್ಯತೆ ನೀಡುವ ವೈದ್ಯರು ತಕ್ಷಣವೇ ಸೇವೆಯಿಂದ ದೂರವಾಗಬಹುದು ಎಂದು ಕಿಡಿಕಾರಿದರು.
ಸೇವಾ ಮನೋಭಾವ ಹೊಂದಿರುವ ವೈದ್ಯರನ್ನು ನೇಮಿಸಿ ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು ಆಡಳಿತದ ಜವಾಬ್ದಾರಿ ಎಂದು ಡಿಹೆಚ್ಒ ಅವರಿಗೆ ಸೂಚಿಸಿದರು.
ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆಯಿಂದ ಪಿಜಿ ವೈದ್ಯರೇ ಹೆಚ್ಚಿನ ರೋಗಿಗಳನ್ನು ನೋಡುತ್ತಿದ್ದಾರೆ ಎಂಬ ದೂರುಗಳು ಬಂದಿದ್ದು, ಈ ಬಗ್ಗೆ ತಕ್ಷಣ ಗಮನಹರಿಸಲು ಸೂಚನೆ ನೀಡಿದರು. ಔಷಧ ಉಗ್ರಾಣದ ಸಮಸ್ಯೆಗಳ ಕುರಿತು ಸ್ಪಷ್ಟ ಮಾಹಿತಿ ನೀಡುವಂತೆ ಸಂಬಂಧಿಸಿದವರಿಗೆ ತಿಳಿಸಿದರು. ಸಮಸ್ಯೆಗಳನ್ನು ಮರೆಮಾಚದೆ ತಿಳಿಸಿದರೆ ಮಾತ್ರ ಅವುಗಳನ್ನು ಬಗೆಹರಿಸಲು ಸಾಧ್ಯ ಎಂದು ಹೇಳಿದರು.
ಲ್ಯಾಬ್ ತಂತ್ರಜ್ಞರಿಂದ ಸಮರ್ಪಕ ಮಾಹಿತಿ ದೊರೆಯದಿರುವುದು ಹಾಗೂ ರೋಗಿಗಳು ರಶೀದಿ ಹಿಡಿದು ಓಡಾಡುವ ಪರಿಸ್ಥಿತಿ ಇರುವುದಾಗಿ ಬಂದಿರುವ ದೂರುಗಳ ಬಗ್ಗೆ ಗಂಭೀರವಾಗಿ ಗಮನಹರಿಸಬೇಕೆಂದು ಸೂಚಿಸಿದರು.
ಬೇಸಿಗೆ ಹಿನ್ನೆಲೆಯಲ್ಲಿ ರೋಗಿಗಳ ಅನುಕೂಲಕ್ಕಾಗಿ ಫ್ಯಾನ್ಗಳನ್ನು ಅಳವಡಿಸುವುದು, ಮಹಿಳೆಯರಿಗಾಗಿ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿ ನಿರ್ಮಿಸುವ ಕುರಿತು ಬೇಡಿಕೆ ಕೇಳಿಬಂದಿದ್ದು, ನಿರ್ಮಿತಿ ಕೇಂದ್ರದ ಇಂಜಿನಿಯರ್ರಿಂದ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಆರಂಭಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು. ರಾತ್ರಿ ವೇಳೆ ಸುರಕ್ಷತೆಗಾಗಿ ಪೊಲೀಸ್ ಸಿಬ್ಬಂದಿ ನಿಯೋಜನೆ ಕುರಿತೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಆಸ್ಪತ್ರೆಯಲ್ಲಿ ಸ್ವಚ್ಛತೆ ಹಾಗೂ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು. ಅಗತ್ಯವಿರುವ ಸಾಮಗ್ರಿಗಳನ್ನು ಹಂತ ಹಂತವಾಗಿ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ದಾವಣಗೆರೆಯ ಹಳೆ ಭಾಗದಲ್ಲಿರುವ ಈ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸುತ್ತಿರುವುದರಿಂದ ಯಾರನ್ನೂ ಹೆಚ್ಚು ಸಮಯ ಕಾಯಿಸದೇ ಸಮರ್ಪಕ ಸೇವೆ ನೀಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಡಿಹೆಚ್ಒ ಡಾ. ಷಣ್ಮುಖಪ್ಪ ಹಾಗೂ ಆಸ್ಪತ್ರೆಯ ಅಧೀಕ್ಷಕರು ಉಪಸ್ಥಿತರಿದ್ದರು.
ಹೆಚ್ಪಿವಿ ಲಸಿಕೆ ಕುರಿತು ಜಾಗೃತಿ
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಹೆಚ್ಪಿವಿ ಲಸಿಕೆ ಪರಿಣಾಮಕಾರಿ ರಕ್ಷಣೆಯಾಗಿದೆ. 9ರಿಂದ 14 ವರ್ಷದ ಹೆಣ್ಣುಮಕ್ಕಳು ತಮ್ಮ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ಪಡೆಯಬಹುದು. ಮಾರ್ಚ್ 13 ರಿಂದ ರಾಜ್ಯಾದ್ಯಂತ ಈ ಲಸಿಕೆ ನೀಡಲಾಗುತ್ತಿದೆ.
ದಾವಣಗೆರೆ ಜಿಲ್ಲೆಗೆ ಒಟ್ಟು 15,175 ಡೋಸ್ ಲಸಿಕೆ ಬಂದಿದ್ದು, ಮೊದಲ ಹಂತದಲ್ಲಿ 7,535 ಹಾಗೂ ಎರಡನೇ ಹಂತದಲ್ಲಿ 7,640 ಡೋಸ್ ಲಭ್ಯವಾಗಿದೆ. ಇದುವರೆಗೆ ಜಿಲ್ಲೆಯಲ್ಲಿ 3,570 ಹೆಣ್ಣುಮಕ್ಕಳಿಗೆ ಲಸಿಕೆ ನೀಡಲಾಗಿದೆ.
ಹೆಣ್ಣುಮಕ್ಕಳ ಆರೋಗ್ಯಕರ ಭವಿಷ್ಯಕ್ಕಾಗಿ ಈ ಲಸಿಕೆ ಮಹತ್ವದ ಹೆಜ್ಜೆಯಾಗಿದ್ದು, ಹೆಚ್ಚಿನವರು ಇದರ ಪ್ರಯೋಜನ ಪಡೆಯಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕರೆ ನೀಡಿದರು.
ಅತ್ಯಾಚಾರ ಆರೋಪಿಗೆ ಹೈಕೋರ್ಟ್ ತಪರಾಕಿ: ಸಂತ್ರಸ್ತೆಗೆ ಪ್ರತಿ ತಿಂಗಳು ₹75,000 ಪಾವತಿಸಲು ಆದೇಶ








