ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ವಿರುದ್ಧದ ವಿವಾದಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಅಮೆರಿಕದಲ್ಲಿ ಜನ್ಮಸಿದ್ಧ ಪೌರತ್ವದ (Birthright Citizenship) ಕುರಿತಾದ ಚರ್ಚೆಯ ನಡುವೆ, ಭಾರತವನ್ನು “ನರಕದ ಕೂಪ” (Hell-hole) ಎಂದು ಜರಿದಿದ್ದ ಪೋಸ್ಟ್ ಅನ್ನು ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ರೀ-ಪೋಸ್ಟ್ ಮಾಡಿದ್ದಾರೆ.
ಅಮೆರಿಕದ ಸಂವಿಧಾನದ 14ನೇ ತಿದ್ದುಪಡಿಯ ಅಡಿಯಲ್ಲಿ ವಿದೇಶಿಯರಿಗೆ ಸಿಗುವ ಜನ್ಮಸಿದ್ಧ ಪೌರತ್ವವನ್ನು ರದ್ದುಗೊಳಿಸಬೇಕು ಎಂಬುದು ಟ್ರಂಪ್ ಅವರ ಪ್ರಮುಖ ಚುನಾವಣಾ ಭರವಸೆಗಳಲ್ಲಿ ಒಂದಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರೊಬ್ಬರು, “ಚೀನಾ, ಭಾರತ ಅಥವಾ ಇನ್ನಾವುದೋ ನರಕದ ಕೂಪಗಳಿಂದ ಬಂದವರು ಅಮೆರಿಕದ ಮಣ್ಣಿನಲ್ಲಿ ಮಗು ಪಡೆದ ತಕ್ಷಣ ಅದಕ್ಕೆ ಪೌರತ್ವ ಸಿಗಬಾರದು” ಎಂದು ಬರೆದುಕೊಂಡಿದ್ದರು. ಇದನ್ನೇ ಟ್ರಂಪ್ ಬೆಂಬಲಿಸಿ ರೀ-ಪೋಸ್ಟ್ ಮಾಡಿದ್ದಾರೆ.
ಚೀನಾ ಮತ್ತು ಭಾರತದಂತಹ ದೇಶಗಳನ್ನು ಅವಹೇಳನಕಾರಿಯಾಗಿ ಬಿಂಬಿಸಿದ್ದ ಪೋಸ್ಟ್ ಅನ್ನು ಟ್ರಂಪ್ ಹಂಚಿಕೊಂಡಿರುವುದು ಭಾರತೀಯ ಮೂಲದ ಅಮೆರಿಕನ್ನರ ಆಕ್ರೋಶಕ್ಕೆ ಕಾರಣವಾಗಿದೆ.
ಅಕ್ರಮ ವಲಸೆಯನ್ನು ತಡೆಯಲು ಜನ್ಮಸಿದ್ಧ ಪೌರತ್ವವನ್ನು ಕೊನೆಗೊಳಿಸುವುದಾಗಿ ಟ್ರಂಪ್ ಪದೇ ಪದೇ ಹೇಳುತ್ತಿದ್ದಾರೆ. ಇದು ಜಾರಿಯಾದಲ್ಲಿ ಅಮೆರಿಕದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಭಾರತೀಯರ ಮೇಲೆ ಪರಿಣಾಮ ಬೀರಲಿದೆ.
ಭಾರತವು ಅಮೆರಿಕದ ಆಪ್ತ ಮಿತ್ರ ರಾಷ್ಟ್ರವಾಗಿದ್ದರೂ, ಅಧ್ಯಕ್ಷರ ಈ ನಡೆ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಕಿರಿಕಿರಿ ಉಂಟುಮಾಡುವ ಸಾಧ್ಯತೆಯಿದೆ.ಟ್ರಂಪ್ ಅವರ ಈ ನಡೆಯನ್ನು ವರ್ಣಭೇದ ನೀತಿ ಮತ್ತು ದ್ವೇಷದ ಭಾಷಣ ಎಂದು ವಿರೋಧ ಪಕ್ಷದ ನಾಯಕರು ಹಾಗೂ ನಾಗರಿಕ ಹಕ್ಕುಗಳ ಹೋರಾಟಗಾರರು ಖಂಡಿಸಿದ್ದಾರೆ.







