ನವದೆಹಲಿ: ವಿಧಾನಸಭಾ ಚುನಾವಣೆಗಳು ಮುಗಿದ ನಂತರ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಭಾರಿ ಏರಿಕೆಯಾಗಲಿವೆ ಎಂಬ ಸುದ್ದಿಯನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಸಂಪೂರ್ಣವಾಗಿ ತಳ್ಳಿಹಾಕಿದೆ. ಇದೊಂದು ‘ಸುಳ್ಳು ಸುದ್ದಿ’ (Fake News) ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಮಾರುಕಟ್ಟೆ ವಿಶ್ಲೇಷಣಾ ಸಂಸ್ಥೆಯೊಂದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವ ಕಾರಣ, ಚುನಾವಣೆ ಮುಗಿದ ನಂತರ ತೈಲ ಕಂಪನಿಗಳು ಬೆಲೆ ಹೆಚ್ಚಿಸಬಹುದು ಎಂದು ಅಂದಾಜಿಸಿತ್ತು. ಈ ವರದಿಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು.
“ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಇಂತಹ ಸುದ್ದಿಗಳು ಜನರಲ್ಲಿ ಭಯ ಮತ್ತು ಗೊಂದಲ ಮೂಡಿಸಲು ಹಬ್ಬಿಸುತ್ತಿರುವ ತಪ್ಪು ಮಾಹಿತಿಯಾಗಿದೆ,” ಎಂದು ಸಚಿವಾಲಯವು ಅಧಿಕೃತವಾಗಿ ತಿಳಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾದರೂ ಭಾರತದಲ್ಲಿ ಬೆಲೆಗಳನ್ನು ಸ್ಥಿರವಾಗಿಡಲು ಸರ್ಕಾರ ಶ್ರಮಿಸಿದೆ ಎಂದು ಅದು ನೆನಪಿಸಿದೆ.








