ಪ್ರತಿದಿನ ಊಟದ ಕೊನೆಯಲ್ಲಿ ಸ್ವಲ್ಪ ಮೊಸರು ಇಲ್ಲದಿದ್ದರೆ ಅನೇಕರಿಗೆ ತೃಪ್ತಿಯೇ ಸಿಗುವುದಿಲ್ಲ. ಆದರೆ, ಎಷ್ಟೇ ಪ್ರಯತ್ನಿಸಿದರೂ ಮನೆಯಲ್ಲಿ ಮೊಸರು ಹಾಲಿನಂತೆ ತೆಳುವಾಗುವುದು ಅಥವಾ ಬೇಗ ಹುಳಿಯಾಗುವುದು ಸಾಮಾನ್ಯ ಸಮಸ್ಯೆ. ಹೋಟೆಲ್ ಅಥವಾ ಡೈರಿಗಳಲ್ಲಿ ಸಿಗುವಂತೆ ಮೊಸರು ‘ಗಿಣ್ಣಿನಂತೆ’ ಗಟ್ಟಿಯಾಗಿ ಬರಬೇಕೆಂದರೆ ಒಂದು ಸುಲಭ ಉಪಾಯವಿದೆ. ಅದುವೇ ಬಾಳೆ ಎಲೆ!
ಏನಿದು ಬಾಳೆ ಎಲೆಯ ರಹಸ್ಯ?
ಸಾಮಾಜಿಕ ಜಾಲತಾಣಗಳಲ್ಲಿ ರವಿಚಂದ್ರನ್ ಹೆಡ್ಡೆ ಎಂಬುವವರು ಈ ಆಸಕ್ತಿದಾಯಕ ವಿಷಯವನ್ನು ಹಂಚಿಕೊಂಡಿದ್ದಾರೆ. ನಾವು ಹಾಲು ಕಾಯಿಸಿ, ಅದು ಉಗುರು ಬೆಚ್ಚಗಾದ ನಂತರ ಹೆಪ್ಪು ಹಾಕುವಾಗ (ಮೊಸರು ಸೇರಿಸುವಾಗ), ಅದರಲ್ಲಿ ಒಂದು ಸಣ್ಣ ಬಾಳೆ ಎಲೆಯ ತುಂಡನ್ನು ಹಾಕಬೇಕು.
ಇದರಿಂದ ಆಗುವ ಪ್ರಯೋಜನಗಳೇನು?
ಗಟ್ಟಿಯಾದ ಮೊಸರು: ಬಾಳೆ ಎಲೆಯಲ್ಲಿರುವ ನೈಸರ್ಗಿಕ ಗುಣಗಳು ಹಾಲು ಗಟ್ಟಿಯಾಗಿ ಹೆಪ್ಪುಗಟ್ಟಲು ಸಹಾಯ ಮಾಡುತ್ತವೆ. ಮರುದಿನ ಬೆಳಗ್ಗೆ ನೋಡುವಾಗ ಮೊಸರು ಗಟ್ಟಿಯಾಗಿರುತ್ತದೆ.
ರುಚಿ ಮತ್ತು ಸುಗಂಧ: ಈ ವಿಧಾನದಿಂದ ತಯಾರಾದ ಮೊಸರು ಹೆಚ್ಚು ಸಿಹಿಯಾಗಿರುತ್ತದೆ ಮತ್ತು ಬಾಳೆ ಎಲೆಯ ಒಂದು ವಿಶೇಷವಾದ ಸುವಾಸನೆ ಅದಕ್ಕೆ ಸಿಗುತ್ತದೆ.
ಹುಳಿಯಾಗುವುದಿಲ್ಲ: ಬೇಸಿಗೆ ಕಾಲದಲ್ಲೂ ಮೊಸರು ಬೇಗನೆ ಹುಳಿಯಾಗದಂತೆ ತಡೆಯಲು ಈ ಟ್ರಿಕ್ ತುಂಬಾ ಕೆಲಸ ಮಾಡುತ್ತದೆ.
ಬಳಸುವುದು ಹೇಗೆ?
ಮೊದಲು ಹಾಲನ್ನು ಚೆನ್ನಾಗಿ ಕಾಯಿಸಿ, ನಂತರ ಅದು ಸ್ವಲ್ಪ ತಣ್ಣಗಾಗಲು ಬಿಡಿ (ಉಗುರು ಬೆಚ್ಚಗಿರಲಿ).
ನಂತರ ಸ್ವಲ್ಪ ಹೆಪ್ಪು (ಹಳೆಯ ಮೊಸರು) ಹಾಕಿ, ಅದರ ಜೊತೆಗೆ ಶುದ್ಧವಾಗಿ ತೊಳೆದ ಒಂದು ಸಣ್ಣ ಬಾಳೆ ಎಲೆಯ ತುಂಡನ್ನು ಹಾಲಿನೊಳಗೆ ಹಾಕಿ ಮುಚ್ಚಿಡಿ.
ಒಮ್ಮೆ ಈ ರೀತಿ ಗಟ್ಟಿಯಾದ ಮೊಸರು ತಯಾರಾದ ಮೇಲೆ, ಮುಂದಿನ ದಿನಗಳಲ್ಲಿ ಅದೇ ಮೊಸರನ್ನು ಹೆಪ್ಪು ಹಾಕಲು ಬಳಸಬಹುದು. ಪ್ರತಿ ಬಾರಿ ಎಲೆ ಹಾಕುವ ಅಗತ್ಯವಿರುವುದಿಲ್ಲ.








