ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಏರುತ್ತಿದ್ದು, ಸಾರ್ವಜನಿಕರಲ್ಲಿ ‘ಹೀಟ್ ಸ್ಟ್ರೋಕ್’ (ಬಿಸಿಲು ಘಾತ) ಮತ್ತು ಅಂಗಾಂಗ ವೈಫಲ್ಯದ ಆತಂಕ ಮನೆಮಾಡಿದೆ. ಪ್ರಮುಖವಾಗಿ ಮಕ್ಕಳು ಹಾಗೂ ಹಿರಿಯ ನಾಗರಿಕರ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತಿದ್ದು, ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ವೈದ್ಯರು ಸೂಚಿಸಿದ್ದಾರೆ.
ಮಕ್ಕಳಲ್ಲಿ ಹೈಪರ್ಥರ್ಮಿಯಾ
ಮಕ್ಕಳ ಶಾರೀರಿಕ ರಚನೆಯಿಂದಾಗಿ ಅವರು ಬೇಗನೆ ಬಿಸಿಗೆ ತುತ್ತಾಗುತ್ತಾರೆ. ಅವರ ಬೆವರಿನ ಗ್ರಂಥಿಗಳು ಪೂರ್ಣ ಪ್ರಮಾಣದಲ್ಲಿ ವಿಕಸನಗೊಳ್ಳದ ಕಾರಣ, ದೇಹವನ್ನು ತಂಪುಗೊಳಿಸುವ ಪ್ರಕ್ರಿಯೆ ನಿಧಾನವಾಗಿರುತ್ತದೆ. ಇದು ತಕ್ಷಣವೇ ‘ಹೀಟ್ ಸ್ಟ್ರೋಕ್’ ಆಗಿ ಬದಲಾಗುವ ಸಾಧ್ಯತೆ ಇರುತ್ತದೆ.
ಹಿರಿಯರಲ್ಲಿ ಹೃದಯದ ಒತ್ತಡ
ಬಿಸಿಲಿನ ತಾಪದಿಂದಾಗಿ ರಕ್ತವು ಆಂತರಿಕ ಅಂಗಗಳಿಂದ ಚರ್ಮದ ಕಡೆಗೆ ಹರಿಯಲು ಪ್ರಯತ್ನಿಸುತ್ತದೆ (ಪೆರಿಫೆರಲ್ ವಾಸೋಡಿಲೇಷನ್). ಇದರಿಂದ ಹೃದಯದ ಮೇಲೆ ಒತ್ತಡ ಹೆಚ್ಚಾಗಿ, ಈಗಾಗಲೇ ರಕ್ತದೊತ್ತಡ ಅಥವಾ ಮಧುಮೇಹ ಇರುವವರಲ್ಲಿ ಕಿಡ್ನಿ ವೈಫಲ್ಯ ಅಥವಾ ‘ಸೈಲೆಂಟ್ ಹಾರ್ಟ್ ಅಟ್ಯಾಕ್’ ಸಂಭವಿಸುವ ಅಪಾಯವಿರುತ್ತದೆ.
ವ್ಯಾಮಾಯದ ಸಮಯದಲ್ಲಿ ಬದಲಾವಣೆ ಅಗತ್ಯ
ಬಿಸಿಲಿನ ಬೇಗೆಯಿಂದ ಪಾರಾಗಲು ವ್ಯಾಯಾಮದ ಕ್ರಮದಲ್ಲಿ ಈ ಕೆಳಗಿನ ಬದಲಾವಣೆ ಮಾಡಿಕೊಳ್ಳಲು ಸೂಚಿಸಲಾಗಿದೆ:
ನಿಮ್ಮ ಬೆಳಗಿನ ನಡಿಗೆಯನ್ನು ಸೂರ್ಯೋದಯಕ್ಕಿಂತ ಮುಂಚೆಯೇ ಪೂರ್ಣಗೊಳಿಸಿ.
ಹಿರಿಯರು ಮತ್ತು ಮಕ್ಕಳು ಚೆನ್ನಾಗಿ ಗಾಳಿ ಮತ್ತು ನೆರಳಿರುವ ಸ್ಥಳದಲ್ಲಿರಬೇಕು.
ದೇಹವನ್ನು ತಂಪಾಗಿರಿಸಲು ಒದ್ದೆ ಬಟ್ಟೆ ಅಥವಾ ಎಸಿ ಸೌಲಭ್ಯವಿದ್ದರೆ ಅದರ ಬಳಕೆ ಮಾಡುವುದು ಉತ್ತಮ.
ಮುನ್ನೆಚ್ಚರಿಕೆ ಮತ್ತು ಪರಿಹಾರಗಳು
ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ವೈದ್ಯರು ನೀಡಿರುವ ಪ್ರಮುಖ ಸಲಹೆಗಳು ಇಲ್ಲಿವೆ:
ಸತತ ನೀರು ಕುಡಿಯಿರಿ: ಸಕ್ಕರೆಯುಕ್ತ ಪಾನೀಯಗಳಿಗಿಂತ ಹೆಚ್ಚಾಗಿ ನೀರು ಕುಡಿಯುವುದು ಉತ್ತಮ.
ಪಾನೀಯಗಳ ಆಯ್ಕೆ: ಕಾರ್ಬೋನೇಟೆಡ್ ಅಥವಾ ಅತಿಯಾದ ಸಕ್ಕರೆಯುಕ್ತ ಪಾನೀಯಗಳನ್ನು ತಪ್ಪಿಸಿ. ಬದಲಾಗಿ ಓ.ಆರ್.ಎಸ್ ಅಥವಾ ಮಜ್ಜಿಗೆಯನ್ನು ಸೇವಿಸಿ.
ತಾಜಾ ಆಹಾರ: ಆಹಾರ ತಯಾರಿಸಿದ ತಕ್ಷಣವೇ ಸೇವಿಸುವುದು ಉತ್ತಮ. ರಸ್ತೆ ಬದಿಯ ಕತ್ತರಿಸಿದ ಹಣ್ಣುಗಳು ಅಥವಾ ಸಲಾಡ್ಗಳನ್ನು ಸೇವಿಸಬೇಡಿ, ಏಕೆಂದರೆ ಇವುಗಳಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ.
ಕಾರಣಗಳೇನು?
ಈ ವರ್ಷದ ಅತಿಯಾದ ತಾಪಮಾನಕ್ಕೆ ‘ಎಲ್ ನಿನೋ’ ವಿದ್ಯಮಾನ ಮತ್ತು ನಗರಗಳಲ್ಲಿ ಹೆಚ್ಚುತ್ತಿರುವ ‘ಅರ್ಬನ್ ಹೀಟ್ ಐಲ್ಯಾಂಡ್’ ಪರಿಣಾಮವೇ ಮುಖ್ಯ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಹಸಿರು ಕಡಿಮೆಯಾಗಿ ಕಾಂಕ್ರೀಟ್ ಕಾಡು ಹೆಚ್ಚಾಗಿರುವುದರಿಂದ ರಾತ್ರಿಯ ವೇಳೆಯಲ್ಲೂ ವಾತಾವರಣ ತಂಪಾಗುತ್ತಿಲ್ಲ, ಇದು ‘ಮೈಕ್ರೋ ಕ್ಲೈಮೇಟ್’ ಸೃಷ್ಟಿಗೆ ಕಾರಣವಾಗಿದೆ.








