ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಮಂಗಳವಾರ ತಾಲ್ಲೂಕು ಆಡಳಿತದ ಸಹಯೋಗದೊಂದಿಗೆ ಶ್ರೀ ಶಂಕರ ಭಗವತ್ಪಾದಾಚಾರ್ಯರ ಜಯಂತಿ ಮಹೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಗರ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಅವರು ಮಠದ ಅಭಿವೃದ್ಧಿ ಹಾಗೂ ಪಟ್ಟಣದ ಸೌಂದರ್ಯೀಕರಣಕ್ಕೆ ಸಂಬಂಧಿಸಿದಂತೆ ಹಲವು ಘೋಷಣೆಗಳನ್ನು ಮಾಡಿದರು.
ಅಭಿವೃದ್ಧಿ ಕಾರ್ಯಗಳಿಗೆ ಶಾಸಕರ ಭರವಸೆ:
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬೇಳೂರು, ಜನಪರ ಕೆಲಸಗಳಿಗೆ ಸದಾ ಬೆಂಬಲ ನೀಡುವ ಇಚ್ಛೆ ವ್ಯಕ್ತಪಡಿಸಿದರು.
-
ದೇವಸ್ಥಾನಗಳ ಅಭಿವೃದ್ಧಿ: ಗಣಪತಿ ದೇವಸ್ಥಾನವನ್ನು 3.5 ಕೋಟಿ ರೂ. ವೆಚ್ಚದಲ್ಲಿ ಕೇರಳ ಮಾದರಿಯಲ್ಲಿ ನಿರ್ಮಿಸಲಾಗುವುದು. ಇದಕ್ಕಾಗಿ ಈಗಾಗಲೇ 50 ಲಕ್ಷ ರೂ. ಬಿಡುಗಡೆಯಾಗಿದೆ.
-
ಪ್ರವಾಸೋದ್ಯಮ ಮತ್ತು ಸೌಲಭ್ಯ: ಗಣಪತಿ ಕೆರೆಯ ಮೇಲೆ 2 ಕೋಟಿ ರೂ. ವೆಚ್ಚದಲ್ಲಿ ಆಕರ್ಷಕ ಉದ್ಯಾನವನ ನಿರ್ಮಾಣ ಹಾಗೂ ಬಡವರಿಗೆ ಅನುಕೂಲವಾಗುವಂತೆ ಕಲ್ಯಾಣ ಮಂಟಪ ನಿರ್ಮಿಸಲಾಗುವುದು.
-
ಶಂಕರ ಮಠಕ್ಕೆ ಅನುದಾನ: ದೇಶದ ಪವಿತ್ರ ಸ್ಥಳಗಳಲ್ಲಿ ಒಂದಾದ ಶೃಂಗೇರಿ ಮಠದ ಶಾಖೆಯಾಗಿರುವ ಇಲ್ಲಿನ ಶಂಕರ ಮಠದ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ಅಗತ್ಯ ಅನುದಾನ ಒದಗಿಸುವುದಾಗಿ ಅವರು ಭರವಸೆ ನೀಡಿದರು.
ಧರ್ಮ ಜಾಗೃತಿಯಲ್ಲಿ ಶಂಕರಾಚಾರ್ಯರ ಕೊಡುಗೆ:
ಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, “ಆದಿ ಶಂಕರಾಚಾರ್ಯರು ಅಖಂಡ ಭಾರತದ ಪರಿಕಲ್ಪನೆ ನೀಡಿದವರು. ನಾಲ್ಕು ದಿಕ್ಕುಗಳಲ್ಲಿ ಪೀಠಗಳನ್ನು ಸ್ಥಾಪಿಸಿ ಸನಾತನ ಧರ್ಮವನ್ನು ಒಗ್ಗೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ,” ಎಂದರು.
-
ಮಠದ ನವೀಕರಣ: ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಮಠವನ್ನು ಅಭಿವೃದ್ಧಿಪಡಿಸುವ ಯೋಜನೆಯಿದ್ದು, ಇದರಲ್ಲಿ ಎರಡು ಮಹಾದ್ವಾರಗಳು, ಶಂಕರ ವೃತ್ತ, ಉದ್ಯಾನ ಮತ್ತು ಸಭಾಭವನ ನಿರ್ಮಾಣ ಸೇರಿದೆ.
-
ಜಾತ್ಯತೀತ ಸೇವೆ: ಈ ಮಠವು ಎಲ್ಲ ಸಮುದಾಯದವರನ್ನು ಒಳಗೊಂಡು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ ಎಂದು ಅವರು ತಿಳಿಸಿದರು.

ಸನ್ಮಾನ ಮತ್ತು ಗೌರವ ಸಮರ್ಪಣೆ:
-
ಪತ್ರಕರ್ತ ಮಹೇಶ್ ಹೆಗಡೆಗೆ ಸನ್ಮಾನ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪುರಸ್ಕೃತರಾದ ಮಹೇಶ್ ಹೆಗಡೆ ಮತ್ತು ವೆಂಕಟೇಶ್ ಅವರಿಗೆ ‘ಶಾರದಾ ಪ್ರಸಾದ’ ಪುರಸ್ಕಾರ ನೀಡಿ ಗೌರವಿಸಲಾಯಿತು.
-
ಗೌರವಾರ್ಪಣೆ: ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾದಂತ ಪವಿತ್ರಾ ನಾಗರಾಜ್, ಉಪಾಧ್ಯಕ್ಷ ಶ್ರೀನಿವಾಸ್ ಮೇಸ್ತ್ರಿ, ಸಹ ಕಾರ್ಯದರ್ಶಿಗಳಾದಂತ ಡಿಶ್ ಗುರು, ಪರುಷೋತ್ತಮ್(ಪುಚ್ಚಿ) ಹಾಗೂ ಖಜಾಂಚಿ ವಿ.ಶಂಕರ್(ಮಾಸ್ಟರ್ ಶಂಕರ್), ಮಾಜಿ ಅಧ್ಯಕ್ಷ ಕೆ.ಎನ್ ನಾಗೇಂದ್ರ ಅವರನ್ನು ಶಾಸಕರು ಅಭಿನಂದಿಸಿದರು. ಇದೇ ವೇಳೆ ಮಠದ ವತಿಯಿಂದ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಸನ್ಮಾನಿಸಲಾಯಿತು.
ಗಣ್ಯರ ಉಪಸ್ಥಿತಿ
ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಪ್ರಸನ್ನ ಟಿ., ಉಪ ತಹಸೀಲ್ದಾರ್ ರತ್ನಾಕರ, ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರವೀಶಕುಮಾರ್, ಟಿ.ವಿ ಪಾಂಡುರಂಗ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಪವಿತ್ರ ಮತ್ತು ತಂಡದವರಿಂದ ಪ್ರಾರ್ಥನೆ ನಡೆದರೆ, ಪ್ರಭಾಕರರಾವ್ ಸ್ವಾಗತಿಸಿದರು ಮತ್ತು ಜ್ಯೋತಿ ಮಣೂರು ವಂದಿಸಿದರು. ಮ.ಸ. ನಂಜುಂಡಸ್ವಾಮಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..
ಬಸವಾದಿ ಶರಣರ ತತ್ವಗಳು ಸಮಾಜದ ಪ್ರಗತಿಗೆ ಪೂರಕ: ಶಾಸಕ ಗೋಪಾಲಕೃಷ್ಣ ಬೇಳೂರು
ಗುರುಗಳು ಹೇಳಿದ ಆ ಮಾತೇ ಆ ಯುವಕನ ಬದುಕು ಬದಲಿಸಿತು. ಅದೇನು ಅಂತ ಈ ಸುದ್ದಿ ಓದಿ!








