ಬೆಂಗಳೂರು: ರಾಜ್ಯದಲ್ಲಿ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಬಳಸಲು ಸಲ್ಲಿಸುವ ಅಫಿಡವಿಟ್ ಆಧಾರಿತ ಭೂಪರಿವರ್ತನೆ ಅರ್ಜಿಗಳನ್ನು ಇನ್ನು ಮುಂದೆ ಅತ್ಯಂತ ವೇಗವಾಗಿ ವಿಲೇವಾರಿ ಮಾಡಲು ಕಂದಾಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಮಾಸ್ಟರ್ ಪ್ಲಾನ್ ವ್ಯಾಪ್ತಿಯ ಹೊರಗಿರುವ ಜಮೀನುಗಳಿಗೆ ಸಂಬಂಧಿಸಿದಂತೆ ಈ ಹೊಸ ನಿಯಮ ಅನ್ವಯವಾಗಲಿದೆ.
ಏನಿದು ಹೊಸ ಆದೇಶ?
ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95ರ ಅಡಿಯಲ್ಲಿ ಭೂಪರಿವರ್ತನಾ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಸರ್ಕಾರವು ನಿಯಮಗಳಿಗೆ ತಿದ್ದುಪಡಿ ತಂದಿದೆ. ಇದರ ಪ್ರಮುಖ ಅಂಶಗಳೆಂದರೆ:
-
30 ದಿನಗಳ ಕಾಲಮಿತಿ: ಭೂಪರಿವರ್ತನೆಗಾಗಿ ಅರ್ಜಿ ಸಲ್ಲಿಸಿದ ದಿನಾಂಕದಿಂದ 30 ದಿನಗಳ ಒಳಗೆ ಜಿಲ್ಲಾಧಿಕಾರಿಗಳು ಯಾವುದೇ ನಿರ್ಧಾರ ಕೈಗೊಳ್ಳದಿದ್ದರೆ, ಅದನ್ನು ‘ಪರಿಭಾವಿತ ಭೂಪರಿವರ್ತನೆ’ (Deemed Conversion) ಎಂದು ಪರಿಗಣಿಸಲಾಗುತ್ತದೆ.
-
ಸ್ವಯಂಚಾಲಿತ ಅನುಮೋದನೆ: ನಿಗಧಿತ ಅವಧಿಯಲ್ಲಿ ವಿಲೇವಾರಿಯಾಗದ ಅರ್ಜಿಗಳಿಗೆ ತಂತ್ರಾಂಶದ ಮೂಲಕ ಸ್ವಯಂಚಾಲಿತವಾಗಿ ಅನುಮೋದನೆ ನೀಡಲಾಗುತ್ತದೆ.
-
ಶುಲ್ಕ ಪಾವತಿ: ಅರ್ಜಿದಾರರು ನಿಗಧಿತ ಭೂಪರಿವರ್ತನಾ ಶುಲ್ಕ ಪಾವತಿಸಿದ ತಕ್ಷಣವೇ ತಂತ್ರಾಂಶದ ಮೂಲಕ ಸ್ವಯಂಚಾಲಿತವಾಗಿ ಭೂಪರಿವರ್ತನೆ ಆದೇಶ ಸೃಜಿಸಲ್ಪಡುತ್ತದೆ.
ಅಧಿಕಾರಿಗಳಿಗೆ ಹಂಚಿಕೆಯಾದ ಕಾಲಾವಕಾಶ:
ಅರ್ಜಿಯ ಪರಿಶೀಲನೆಗಾಗಿ ವಿವಿಧ ಹಂತದ ಅಧಿಕಾರಿಗಳಿಗೆ ಈ ಕೆಳಗಿನಂತೆ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ:
-
ತಹಶೀಲ್ದಾರ್/ಅರಣ್ಯ ಇಲಾಖೆ: ಅಭಿಪ್ರಾಯ ನೀಡಲು 15 ದಿನಗಳು.
-
ಜಿಲ್ಲಾಧಿಕಾರಿ ಕಛೇರಿ ವಿಷಯ ನಿರ್ವಾಹಕರು: 5 ದಿನಗಳು.
-
ಅಪರ ಜಿಲ್ಲಾಧಿಕಾರಿಗಳು: 5 ದಿನಗಳು.
-
ಜಿಲ್ಲಾಧಿಕಾರಿಗಳು: 5 ದಿನಗಳು.
ಒಟ್ಟಾರೆಯಾಗಿ 30 ಕೆಲಸದ ದಿನಗಳ ಒಳಗೆ ಜಿಲ್ಲಾಧಿಕಾರಿಗಳು ತೀರ್ಮಾನ ಕೈಗೊಳ್ಳದಿದ್ದಲ್ಲಿ, ಸದರಿ ಅರ್ಜಿಗೆ ಅನುಮೋದನೆ ಇದೆ ಎಂದು ಪರಿಗಣಿಸಿ, ಶುಲ್ಕ ಪಾವತಿಗಾಗಿ ಅರ್ಜಿದಾರರ ಲಾಗಿನ್ಗೆ ವರ್ಗಾವಣೆಯಾಗುತ್ತದೆ.
ಸಾರ್ವಜನಿಕರಿಗೆ ಅನುಕೂಲ:
ಈ ಹೊಸ ಕ್ರಮದಿಂದಾಗಿ ಸಾರ್ವಜನಿಕರು ಭೂಪರಿವರ್ತನೆಗಾಗಿ ಸರ್ಕಾರಿ ಕಛೇರಿಗಳಿಗೆ ಅಲೆಯುವುದು ತಪ್ಪಲಿದೆ. ಅಕ್ರಮಗಳನ್ನು ತಡೆಯಲು ಮತ್ತು ಪಾರದರ್ಶಕತೆ ತರಲು ತಂತ್ರಜ್ಞಾನದ ಬಳಕೆಯನ್ನು ಈ ಮೂಲಕ ಕಡ್ಡಾಯಗೊಳಿಸಲಾಗಿದೆ. ಈ ಕುರಿತು ಕಂದಾಯ ಆಯುಕ್ತರಾದ ಮೀನಾ ನಾಗರಾಜ್ ಅವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

GOOD NEWS: ಕೆಎಸ್ಆರ್ಟಿಸಿ ನೌಕರರಿಗೆ ಸಿಹಿ ಸುದ್ದಿ: ಏಪ್ರಿಲ್ ತಿಂಗಳ ವೇತನ ಏಪ್ರಿಲ್.30ರಂದೇ ಪಾವತಿ!
ಬೆಂಗಳೂರಲ್ಲಿ ಜನಗಣತಿಗೆ ಗೈರಾದವರಿಗೆ ಜಿಬಿಎ ಶಾಕ್: ಎಫ್ಐಆರ್ ದಾಖಲಿಸಿ, ಕಾನೂನು ಕ್ರಮದ ಎಚ್ಚರಿಕೆ








