ಟೆನ್ನಿಸ್ ಲೋಕದ ದಿಗ್ಗಜ ನೋವಾಕ್ ಜೊಕೊವಿಕ್ ಅವರು ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಅವರ ಬಗ್ಗೆ ಹೊಂದಿರುವ ಅಭಿಮಾನ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. “ನಾನು ಇಂದು ಕ್ರಿಕೆಟ್ ನೋಡುತ್ತಿದ್ದೇನೆ ಎಂದರೆ ಅದಕ್ಕೆ ವಿರಾಟ್ ಕೊಹ್ಲಿಯೇ ಕಾರಣ” ಎಂದು ಹೇಳುವ ಮೂಲಕ ಜೊಕೊವಿಕ್ ಜಗತ್ತಿನಾದ್ಯಂತ ಇರುವ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದಾರೆ.
ಐಪಿಎಲ್ 2026ರ ಸಂಭ್ರಮದ ನಡುವೆಯೇ ‘ಟೈಮ್ಸ್ ನೌ’ ಜೊತೆ ಮಾತನಾಡಿದ ಸರ್ಬಿಯಾದ ಈ ಟೆನ್ನಿಸ್ ಚಕ್ರವರ್ತಿ, ಕೊಹ್ಲಿ ಮೇಲಿರುವ ತಮ್ಮ ಗೌರವವನ್ನು ಹಂಚಿಕೊಂಡಿದ್ದಾರೆ.
ಜೊಕೊವಿಕ್ ಹೇಳಿದ್ದೇನು?
ಕೊಹ್ಲಿಯ ಆಟದ ಮೇಲಿನ ಉತ್ಸಾಹ ಮತ್ತು ಅವರ ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜೊಕೊವಿಕ್, ವಿರಾಟ್ ನನ್ನ ಆತ್ಮೀಯ ಸ್ನೇಹಿತ. ಅವರ ಬಗ್ಗೆ ನನಗೆ ಅಪಾರ ಗೌರವ ಮತ್ತು ಅಭಿಮಾನವಿದೆ. ನಿಜ ಹೇಳಬೇಕೆಂದರೆ, ಅವರ ಕಾರಣದಿಂದಲೇ ನಾನು ಕ್ರಿಕೆಟ್ ವೀಕ್ಷಿಸಲು ಪ್ರಾರಂಭಿಸಿದೆ. ಅದಕ್ಕೂ ಮೊದಲು ನನಗೆ ಈ ಕ್ರೀಡೆಯ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ. ಅವರ ಮೂಲಕವೇ ನಾನು ಕ್ರಿಕೆಟ್ ಅನ್ನು ಹೆಚ್ಚು ಗಮನಿಸುತ್ತಿದ್ದೇನೆ.”
ಭಾರತಕ್ಕೆ ಭೇಟಿ ನೀಡುವ ಇಚ್ಛೆ
ಇದೇ ವೇಳೆ ಭಾರತಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ ಅವರು, “ನಾವು ಯಾವಾಗಲೂ ಸಂಪರ್ಕದಲ್ಲಿರುತ್ತೇವೆ. ಮುಂದಿನ ದಿನಗಳಲ್ಲಿ ನಾನು ಭಾರತಕ್ಕೆ ಭೇಟಿ ನೀಡಿದಾಗ ಖಂಡಿತವಾಗಿಯೂ ವಿರಾಟ್ ಅವರನ್ನು ಭೇಟಿಯಾಗುತ್ತೇನೆ. ನಾವಿಬ್ಬರೂ ಸೇರಿ ಸ್ವಲ್ಪ ಟೆನ್ನಿಸ್ ಮತ್ತು ಸ್ವಲ್ಪ ಕ್ರಿಕೆಟ್ ಆಡುತ್ತಾ, ಕ್ರೀಡೆಯ ಮೂಲಕ ಸಕಾರಾತ್ಮಕ ಸಂದೇಶವನ್ನು ಹರಡುವ ಆಸೆಯಿದೆ,” ಎಂದು ತಿಳಿಸಿದರು.
ಕ್ರೀಡಾ ಗಡಿ ಮೀರಿದ ಸ್ನೇಹ
ವಿರಾಟ್ ಕೊಹ್ಲಿ ಮತ್ತು ನೋವಾಕ್ ಜೊಕೊವಿಕ್ ನಡುವಿನ ಈ ಸ್ನೇಹ ಹೊಸದೇನಲ್ಲ. ಕಳೆದ ಕೆಲವು ವರ್ಷಗಳಿಂದ ಈ ಇಬ್ಬರೂ ದಿಗ್ಗಜರು ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರನ್ನೊಬ್ಬರು ಅಭಿನಂದಿಸುತ್ತಾ ಬಂದಿದ್ದಾರೆ. ಕೇವಲ ಕ್ರಿಕೆಟ್ ಮಾತ್ರವಲ್ಲದೆ, ಕೊಹ್ಲಿಯ ಫಿಟ್ನೆಸ್ ಮಂತ್ರ ಮತ್ತು ಗೆಲ್ಲುವ ಹಠ ಬೇರೆ ಬೇರೆ ಕ್ರೀಡೆಗಳ ಸಾಧಕರಿಗೂ ಸ್ಫೂರ್ತಿಯಾಗಿದೆ ಎಂಬುದಕ್ಕೆ ಜೊಕೊವಿಕ್ ಅವರ ಮಾತುಗಳೇ ಸಾಕ್ಷಿ.
NOVAK DJOKOVIC ON VIRAT KOHLI. 🗣️
“Virat Kohli is the reason why I started following cricket. He’s a dear friend and someone I respect and admire. Hopefully when I come to India, we can do a bit of tennis and cricket, spread positive vibes and celebrate sports”. (Times Now). pic.twitter.com/cExSTTTiQX
— Mufaddal Vohra (@mufaddal_vohra) April 21, 2026








