ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಿಸಿಎಸ್ ಕಚೇರಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಪ್ರಕರಣವು ದಿನಕ್ಕೊಂದು ಆಘಾತಕಾರಿ ತಿರುವು ಪಡೆಯುತ್ತಿದೆ. ಸಂತ್ರಸ್ತ ಮಹಿಳಾ ಉದ್ಯೋಗಿಯು ಪೊಲೀಸರ ಮುಂದೆ ನೀಡಿರುವ ಹೇಳಿಕೆಯು ಕಚೇರಿಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸುವಂತಿದೆ.
“ಅಧಿಕಾರಿಯು ಕಚೇರಿಯಲ್ಲಿ ಎಲ್ಲರ ಮುಂದೆಯೇ ನನ್ನ ಸೀರೆ ಎಳೆಯಲು ಯತ್ನಿಸುತ್ತಿದ್ದ. ನಾನು ಸೀಟಿನಲ್ಲಿ ಕುಳಿತಿದ್ದಾಗ ಅಸಭ್ಯವಾಗಿ ನನ್ನ ತೊಡೆಯ ಮೇಲೆ ಕೈ ಹಾಕುತ್ತಿದ್ದ,” ಎಂದು ಸಂತ್ರಸ್ತೆಯು ತನ್ನ ದೂರಿನಲ್ಲಿ ವಿವರಿಸಿದ್ದಾರೆ.
ಕೇವಲ ದೈಹಿಕ ಕಿರುಕುಳ ಮಾತ್ರವಲ್ಲದೆ, ಹಣೆಗೆ ಕುಂಕುಮ ಇಟ್ಟುಕೊಳ್ಳಬಾರದೆಂದು ಮತ್ತು ಸೀರೆ ಉಡಬಾರದೆಂದು ಆರೋಪಿಯು ಒತ್ತಡ ಹೇರುತ್ತಿದ್ದನು ಎಂದು ಆಕೆ ತಿಳಿಸಿದ್ದಾರೆ.
“ಈ ಕೃತ್ಯಗಳು ಕಚೇರಿಯ ಇತರರಿಗೆ ತಿಳಿಯುತ್ತಿದ್ದರೂ, ಕೆಲಸ ಕಳೆದುಕೊಳ್ಳುವ ಭೀತಿಯಿಂದ ಯಾರೂ ನನ್ನ ನೆರವಿಗೆ ಬರಲಿಲ್ಲ. ಸಿಸಿಟಿವಿ ಕ್ಯಾಮೆರಾಗಳಿಲ್ಲದ ಜಾಗದಲ್ಲಿ ಈ ದೌರ್ಜನ್ಯ ಹೆಚ್ಚಾಗಿ ನಡೆಯುತ್ತಿತ್ತು,” ಎಂದು ಆಕೆ ಹೇಳಿದ್ದಾರೆ.








