ಲೂಯಿಸಿಯಾನ: ಅಮೆರಿಕದ ಶ್ರೀವ್‌ಪೋರ್ಟ್‌ನ ಸಿಡರ್ ಗ್ರೋವ್ (Cedar Grove) ಬಡಾವಣೆಯಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ನಡೆದ ಭೀಕರ ಗುಂಡಿನ ದಾಳಿಯು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಶಮರ್ ಎಲ್ಕಿನ್ಸ್ (31) ಎಂಬಾತ ನಡೆಸಿದ ಗುಂಡಿನ ದಾಳಿಗೆ ಎಂಟು ಮಕ್ಕಳು ಬಲಿಯಾಗಿದ್ದು, ಇಬ್ಬರು ಮಹಿಳೆಯರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ದಾಳಿಯಲ್ಲಿ ಮೃತಪಟ್ಟ ಎಂಟು ಮಕ್ಕಳ ವಯಸ್ಸು 18 ತಿಂಗಳಿಂದ 14 ವರ್ಷಗಳ ಒಳಗಿದೆ. ವರದಿಗಳ ಪ್ರಕಾರ, ಮೃತಪಟ್ಟವರಲ್ಲಿ ಏಳು ಮಕ್ಕಳು ಆರೋಪಿ ಶಮರ್ ಎಲ್ಕಿನ್ಸ್‌ನ ಸ್ವಂತ ಮಕ್ಕಳೇ ಆಗಿದ್ದಾರೆ.
ದಾಳಿಯಲ್ಲಿ ಇಬ್ಬರು ಮಹಿಳೆಯರ ತಲೆಗೆ ಗುಂಡೇಟು ಬಿದ್ದಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಘಟನೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಬಾಲಕನೊಬ್ಬ ಮಾಳಿಗೆಯಿಂದ ಜಿಗಿದು ಗಾಯಗೊಂಡಿದ್ದಾನೆ.
ಈ ರಕ್ತಪಾತವು ಸಿಡರ್ ಗ್ರೋವ್‌ನ ಮೂರು ಬೇರೆ ಬೇರೆ ಮನೆಗಳಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಶಮರ್ ಎಲ್ಕಿನ್ಸ್ ಈ ಹಿಂದೆ ಅಮೆರಿಕದ ಸೇನೆಯಲ್ಲಿ (Army National Guard) ಕೆಲಸ ಮಾಡಿದ್ದನು. 2019ರಲ್ಲಿ ಈತ ಶಾಲೆಯೊಂದರ ಬಳಿ ಗುಂಡು ಹಾರಿಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಎಂಬ ಮಾಹಿತಿ ಹೊರಬಿದ್ದಿದೆ.
ದಾಳಿಯ ನಂತರ ಆರೋಪಿಯು ಕಾರನ್ನು ಅಪಹರಿಸಿ ಪರಾರಿಯಾಗಲು ಯತ್ನಿಸಿದನು. ಸುಮಾರು 15 ಮೈಲಿಗಳ ಕಾಲ ಬೆನ್ನಟ್ಟಿದ ಪೊಲೀಸರು, ಕೊನೆಗೆ ಗುಂಡಿನ ಚಕಮಕಿಯಲ್ಲಿ ಆತನನ್ನು ಹೊಡೆದುರುಳಿಸಿದ್ದಾರೆ.








