ತಿರುವನಂತಪುರಂ: ಪಶ್ಚಿಮ ಏಷ್ಯಾದ ಹೋರ್ಮುಜ್ ಜಲಸಂಧಿಯಲ್ಲಿ (Strait of Hormuz) ಉಂಟಾಗಿರುವ ಉದ್ವಿಗ್ನತೆಯಿಂದಾಗಿ ಜಾಗತಿಕ ಹಡಗು ಸಂಚಾರದಲ್ಲಿ ಮಹತ್ವದ ಬದಲಾವಣೆಯಾಗುತ್ತಿದ್ದು, ಕೇರಳದ ವಿಳಿಂಜಂ ಅಂತರರಾಷ್ಟ್ರೀಯ ಬಂದರು ವಿಶ್ವದ ಗಮನ ಸೆಳೆಯುತ್ತಿದೆ. ಈ ಕುರಿತು ‘ಎಕ್ಸ್’ (ಟ್ವಿಟರ್) ಮೂಲಕ ಹರ್ಷ ವ್ಯಕ್ತಪಡಿಸಿರುವ ಸಂಸದ ಶಶಿ ತರೂರ್, “100 ಹಡಗುಗಳು, ಒಂದೇ ಗುರಿ” ಎಂದು ಬಣ್ಣಿಸುವ ಮೂಲಕ ಬಂದರಿನ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಹೋರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದಾಗಿ ಅಂತರರಾಷ್ಟ್ರೀಯ ಹಡಗು ಕಂಪನಿಗಳು ಸುರಕ್ಷಿತ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿವೆ. ಈ ಹಿನ್ನೆಲೆಯಲ್ಲಿ ವಿಳಿಂಜಂ ಬಂದರಿನಲ್ಲಿ ಸುಮಾರು 100 ಹಡಗುಗಳು ಲಂಗರು ಹಾಕಲು ಸಾಲಿನಲ್ಲಿ ನಿಂತಿವೆ ಅಥವಾ ಸ್ಥಳಾವಕಾಶಕ್ಕಾಗಿ ಕಾಯುತ್ತಿವೆ.
ಸಿಂಗಾಪುರ ಮತ್ತು ಕೊಲಂಬೊ ಬಂದರುಗಳಿಗೆ ಪೈಪೋಟಿ ನೀಡುತ್ತಿರುವ ವಿಳಿಂಜಂ, ಈಗ ಜಾಗತಿಕ ಹಡಗು ಉದ್ಯಮದ ಹೊಸ ಭರವಸೆಯಾಗಿ ಹೊರಹೊಮ್ಮಿದೆ ಎಂದು ತರೂರ್ ಹೇಳಿದ್ದಾರೆ.ಕಳೆದ ಮಾರ್ಚ್ ತಿಂಗಳೊಂದರಲ್ಲೇ ವಿಳಿಂಜಂ ಬಂದರು 61 ಹಡಗುಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದು, ಇದುವರೆಗಿನ ಗರಿಷ್ಠ ಸಾಧನೆ ಎನಿಸಿಕೊಂಡಿದೆ.








